ADVERTISEMENT

ಪಾರದರ್ಶಕ ಲೆಕ್ಕಪತ್ರ ಸಂಘ ಪ್ರಗತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 3:25 IST
Last Updated 5 ಅಕ್ಟೋಬರ್ 2020, 3:25 IST
ಪರಿಹಾರದ ಚಕ್‌ ಅನ್ನು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ವಿತರಿಸಿದರು
ಪರಿಹಾರದ ಚಕ್‌ ಅನ್ನು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ವಿತರಿಸಿದರು   

ದೊಡ್ಡಬಳ್ಳಾಪುರ: ‘ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಪಾರದರ್ಶಕವಾಗಿ ಲೆಕ್ಕಪತ್ರಗಳನ್ನು ಪಾಲಿಸಿದರೆ ಹಾಲು ಉತ್ಪಾದಕ ಸಹಕಾರಿ ಸಂಘಗಳು ಹಾಗೂ ರೈತರ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್‌ ಹೇಳಿದರು.

ದೊಡ್ಡಬಳ್ಳಾಪುರ ಹಾಲು ಶೀತಲ ಘಟಕದಲ್ಲಿ ನಡೆದ ಕಾರ್ಯನಿರ್ವಾಹಕ ಅಧಿಕಾರಿಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರತಿಯೊಂದು ಡೇರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿ ಲೆಕ್ಕಪುಸ್ತಕಗಳಲ್ಲಿ ಯಾವುದೇ ಲೋಪ ದೋಷಗಳಿಲ್ಲದಂತೆ ನೋಡಿಕೊಳ್ಳುವುದು ಅಗತ್ಯ. ಎಂಪಿಸಿಎಸ್‍ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಬಹುದಿನಗಳ ಬೇಡಿಕೆಯಾದ ವೇತನ ಪರಿಷ್ಕರಣೆಯನ್ನು ಮಾಡಲಾಗಿದೆ. ರೈತರಿಂದ ಹಾಲನ್ನು ಪಡೆಯುವಾಗ ಶೇ 3.5ಕ್ಕಿಂತ ಹೆಚ್ಚಿನ ಫ್ಯಾಟ್ ಇರುವ ಹಾಲನ್ನು ಪಡೆಯಬೇಕು’ ಎಂದರು.

ADVERTISEMENT

ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸ್ವಚ್ಛತೆಯೊಂದಿಗೆ ಇಲ್ಲಿನ ಕೆಲಸ ಮಾಡುವ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂದರು.

ಉಪ ವ್ಯವಸ್ಥಾಪಕ ಡಾ.ಗೋಪಾಲಕೃಷ್ಣ ಮಾತನಾಡಿ, ‘ಉತ್ತಮ ಗುಣಮಟ್ಟದ ಹಾಲಿಗೆ ಮಾತ್ರ ಸರ್ಕಾರದ ಪ್ರೋತ್ಸಾಹ ಧನ ದೊರೆಯಲಿದೆ. ಹಾಲಿನ ಕ್ಯಾನ್‌ಗಳನ್ನು ಸೂಕ್ತವಾಗಿ ಸೀಲ್ ಮಾಡಲೇಬೇಕು. ಇದರಿಂದ ಹಾಲು ಪೋಲಾಗುವುದು ತಪ್ಪಲಿದೆ. ಪ್ರೋತ್ಸಾಹಧನವನ್ನು ದುರುಪಯೋಗ ಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಈಗಾಗಲೇ ಈ ಬಗ್ಗೆ ಹೋಬಳಿವಾರು ಪರಿಶೀಲನೆ ಮಾಡಲಾಗಿದೆ. ಲೋಪಗಳು ಮತ್ತೆ ಪುನರಾವರ್ತನೆ ಆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಇದೇ ವೇಳೆ ವಿವಿಧ ಕಾರಣಗಳಿಂದ ಮೃತಪಟ್ಟ ಎಂಪಿಸಿಎಸ್‌ಗಳಲ್ಲಿನ ಸಿಬ್ಬಂದಿಯ ಕುಟುಂಬದವರಿಗೆ ವಿವಿಧ ಯೋಜನೆಗಳಡಿ ಪರಿಹಾರಧನ ವಿತರಿಸಲಾಯಿತು.

ಪಶು ವೈದ್ಯಕೀಯ ವಿಭಾಗದ ಉಪವ್ಯವಸ್ಥಾಪಕ ಡಾ.ನಾಗರಾಜ್,ವಿಸ್ತಾರಾಣಾಧಿಕಾರಿ ಎಂ. ಅಶ್ವಥಪ್ಪ, ಕುಸುಮ, ಪ್ರಕಾಶ್‌, ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.