ADVERTISEMENT

ವಿಜಯಪುರ: ಅನಧಿಕೃತ ನೀರು ಸಾಗಣೆ ಎರಡು ಟ್ಯಾಂಕರ್ ವಶ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:40 IST
Last Updated 10 ಮಾರ್ಚ್ 2022, 2:40 IST
ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಬಳಿ ಕೆರೆಯಿಂದ ನೀರು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವುದು
ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಬಳಿ ಕೆರೆಯಿಂದ ನೀರು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವುದು   

ವಿಜಯಪುರ: ಚನ್ನರಾಯಪಟ್ಟಣ ಹೋಬಳಿಯ ಬೆಟ್ಟಕೋಟೆ ಕೆರೆಯಲ್ಲಿ ಅನಧಿಕೃತವಾಗಿ ನೀರು ಸಾಗಾಣಿಕೆ ಮಾಡುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಚ್.ಎನ್. ವ್ಯಾಲಿ ಯೋಜನೆಯಡಿ ಈ ಕೆರೆಗೆ ಹರಿದಿರುವ ನೀರನ್ನು ಅನುಮತಿ ಪಡೆಯದೆ ರಸ್ತೆ ಕಾಮಗಾರಿಗೆ ಟ್ಯಾಂಕರ್‌ಗಳ ಮೂಲಕ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಇದರಿಂದ ಅಂತರ್ಜಲ ಮಟ್ಟ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸ್ಥಳೀಯರು ತಹಶೀಲ್ದಾರ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನೀರು ಸಾಗಾಣಿಕೆ ಮಾಡುತ್ತಿದ್ದ ಎರಡು ಟ್ಯಾಂಕರ್‌ ಮತ್ತು ಮೋಟಾರ್‌ಸಹಿತ ಟ್ರ್ಯಾಕ್ಟರ್ ಅನ್ನು ಕಂದಾಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಟ್ಟಕೋಟೆ ಕೆರೆಗೆ ಎಚ್.ಎನ್. ವ್ಯಾಲಿ ಯೋಜನೆಯಡಿ ನೀರು ಹರಿದಿದ್ದು ಕೆರೆ ಭರ್ತಿಯಾಗಿದೆ. ಕೆರೆಯ ಪಕ್ಕದಲ್ಲೇ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಹೊರಬರುತ್ತಿರುವ ದೂಳಿನಿಂದ ರೈತರ ಬೆಳೆಗಳಿಗೆ ಹಾನಿಯುಂಟಾಗುತ್ತಿದೆ ಎಂದು ರೈತರಿಂದ ಹಲವಾರು ದೂರುಗಳು ಕೇಳಿ ಬಂದಿದ್ದವು.

ADVERTISEMENT

ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ರಸ್ತೆಯಲ್ಲಿನ ದೂಳು ನಿಯಂತ್ರಣ ಮಾಡಲು ಪ್ರತ್ಯೇಕವಾಗಿ ನೀರು ಹಾಯಿಸುವ ಬದಲಾಗಿ ಕೆರೆಯಲ್ಲಿನ ನೀರಿಗೆ ಮೋಟಾರ್‌ಗಳನ್ನು ಇಟ್ಟು ನೀರು ಹೊರತೆಗೆಯುತ್ತಿರುವ ಬಗ್ಗೆ ಗಮನಹರಿಸಿದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ತಹಶೀಲ್ದಾರ್ ಶಿವರಾಜ್ ಮಾತನಾಡಿ, ‘ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಆಧರಿಸಿ ಇಲಾಖೆಯ ಸಿಬ್ಬಂದಿ ಕಳುಹಿಸಿ, ಕೆರೆಯಿಂದ ಅನುಮತಿ ಪಡೆಯದೆ ನೀರು ತೆಗೆಯುತ್ತಿದ್ದ ಟ್ಯಾಂಕರ್‌ಗಳು ಹಾಗೂ ಟ್ರ್ಯಾಕ್ಟರನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.