ADVERTISEMENT

ಜೆಡಿಎಸ್‌ ಮುಖಂಡರಿಗೆ ಒಗ್ಗಟ್ಟಿನ ಪಾಠ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪಂಚರತ್ನ ಯಾತ್ರೆ ಸಂಚಾರ: ಸ್ಥಳೀಯರ ಧೋರಣೆಗೆ ಸಿಟ್ಟಾದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 5:12 IST
Last Updated 30 ನವೆಂಬರ್ 2022, 5:12 IST
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಂಗಳವಾರ ನಡೆದ ಪಂಚರತ್ನ ಯಾತ್ರೆಯಲ್ಲಿ ಸೇರಿದ್ದ ಜನಸಮೂಹ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಂಗಳವಾರ ನಡೆದ ಪಂಚರತ್ನ ಯಾತ್ರೆಯಲ್ಲಿ ಸೇರಿದ್ದ ಜನಸಮೂಹ   

ದೊಡ್ಡಬಳ್ಳಾಪುರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಲ್ಲೂಕಿನ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ನಾಗದೇನಹಳ್ಳಿ ಮೂಲಕ ಮಂಗಳವಾರ ಆರಂಭವಾದ ಪಂಚರತ್ನ ಯಾತ್ರೆಯಲ್ಲಿ ವಿವಿಧೆಡೆ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಗೆಲ್ಲದೇ ಇರುವುದಕ್ಕೆ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿರುವುದು ತಿಳಿದಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಒಂದೊಂದು ಸ್ಥಾನವೂ ಮುಖ್ಯ. ಚುನಾವಣೆ ಸಮಯದಲ್ಲಿ ಹಣ ಹಂಚಿ ಆಮಿಷ ತೋರುವ ಜನರಿಗೆ ಬಲಿಯಾಗದೆ ನಿಮ್ಮ ಅಭಿವೃದ್ಧಿ ಬಯಸುವ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಕೋರಿದರು.

ADVERTISEMENT

ಪಕ್ಷದಲ್ಲಿನ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸದೆ ಅವರಿಗೂ ಉತ್ತಮ ಭವಿಷ್ಯ ನಿರ್ಮಾಣವಾಗಬೇಕು. ತಾಲ್ಲೂಕಿನ ಎಲ್ಲಾ ಮುಖಂಡರು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿರುವುದು ಸಂತಸದ ವಿಚಾರ. ಆದರೆ, ಇದು ಕಾಟಾಚಾರಕ್ಕೆ ಆಗದೇ ಹೃದಯದಿಂದ ಆಗಬೇಕು. ಆಗ ಮಾತ್ರ ಜನ ನಂಬುತ್ತಾರೆ ಎಂದರು.

ಅಭ್ಯರ್ಥಿ ಗೆಲ್ಲಿಸಿ ಜೈಕಾರ ಹಾಕಿ:ರಾಜಘಟ್ಟ ಗ್ರಾಮಕ್ಕೆ ಪಂಚರತ್ನ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಜೆಡಿಎಸ್‌ ಮುಖಂಡರ ಹೆಸರು ಹೇಳಿ ಜೈಕಾರ ಕೂಗಿದ ಕಾರ್ಯಕರ್ತರಗೆ ಬುದ್ಧಿ ಹೇಳಿದ ಕುಮಾರಸ್ವಾಮಿ, ‘ಮೊದಲು ನಿಮ್ಮ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ ನಂತರ ಜೈಕಾರ ಹಾಕಿ. ಈಗ ಯಾರಿಗೂ ಜೈಕಾರ ಹಾಕುವುದು ಬೇಡ’ ಎಂದರು.

ಸಿಟ್ಟಾದ ಕುಮಾರಸ್ವಾಮಿ:ರಾಜಘಟ್ಟ ಗ್ರಾಮದಿಂದ ದೊಡ್ಡಬಳ್ಳಾಪುರ ನಗರಕ್ಕೆ ಪಂಚರತ್ನ ಯಾತ್ರೆ ಆಗಮಿಸಬೇಕಿತ್ತು. ಆದರೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ತೂಬಗೆರೆ ಹೋಬಳಿ ಮೂಲಕ ಯಾತ್ರೆ ಸಾಗುವಂತೆ ಮುಖಂಡರೊಬ್ಬರು ಮೈಕ್‌ನಲ್ಲಿ ಹೇಳಿದರು. ಇದರಿಂದ ಸಿಟ್ಟಾದ ಕುಮಾರಸ್ವಾಮಿ ಅವರು ‘ಇಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಸಲು ನಿಗದಿಯಾಗಿದೆ. ಹೀಗಾಗಿ ನೀವು ಕರೆದಲ್ಲಿಗೆ ಬರಲು ಸಾಧ್ಯವಿಲ್ಲ. ಪ್ರತಿದಿನ ರಾತ್ರಿ 2 ಗಂಟೆಯಾಗುತ್ತಿದೆ ಊಟ ಮಾಡಿ ಮಲಗುವುದು’ ಎಂದರು.

ನಂತರ ಸ್ಥಳೀಯ ಮುಖಂಡರ ಮನವಿ ಮೇರೆಗೆ ತೂಬಗೆರೆ ಹೋಬಳಿಗೆ ಭೇಟಿ ನೀಡಿದರು. ಹಾಡೋನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನ ಊಟ ಮಾಡಿದ ಅವರು, ಮಕ್ಕಳೊಂದಿಗೆ ನಿಂತು ಫೋಟೊ ತೆಗೆಸಿಕೊಂಡರು. ದೊಡ್ಡಬಳ್ಳಾಪುರ ನಗರಕ್ಕೆ ಬದಲಾಗಿ ಸಾಸಲು ಹೋಬಳಿಯ ಕಡೆಗೆ ಪಂಚರತ್ನ ಯಾತ್ರೆ ಸಾಗಿತು. ಕುಮಾರಸ್ವಾಮಿ ಅವರು ರಾತ್ರಿ ವಾಸ್ತವ್ಯವನ್ನು ತಾಲ್ಲೂಕಿನ ಕನಸವಾಡಿಯಲ್ಲಿ
ಮಾ
ಡಲಿದ್ದಾರೆ.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್‌ ಗೌಡ, ಡಾ.ಎಚ್‌.ಜಿ. ವಿಜಕುಮಾರ್‌, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ, ಮುಖಂಡರಾದ ಎಚ್. ಅಪ್ಪಯ್ಯ, ಎ. ನರಸಿಂಹಯ್ಯ, ಎಚ್.ಎಂ. ರಮೇಶಗೌಡ, ಹುಸ್ಕೂರು ಆನಂದ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಪತಯ್ಯ, ನಗರ ಘಟಕದ ಅಧ್ಯಕ್ಷ ವಿ.ಎಸ್. ರವಿಕುಮಾರ್, ಟಿಎಪಿಸಿಎಂಎಸ್‌ ಅಧ್ಯಕ್ಷ ವಿ. ಅಂಜನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.