ADVERTISEMENT

‘ಪೋಡಿಯಾಗಿರುವ ಜಮೀನು ತನಿಖೆಗೆ ಒತ್ತಾಯ’

ತಾಲ್ಲೂಕು ಮಾದಿಗ ದಂಡೋರ ಪದಾಧಿಕಾರಿಗಳ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 13:17 IST
Last Updated 14 ಡಿಸೆಂಬರ್ 2018, 13:17 IST
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮಾದಿಗ ದಂಡೋರ ಸಮಿತಿ ಮುಖಂಡರು
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮಾದಿಗ ದಂಡೋರ ಸಮಿತಿ ಮುಖಂಡರು   

ದೇವನಹಳ್ಳಿ: ‘ಪ್ರಸ್ತುತ ತಾಲ್ಲೂಕಿನಲ್ಲಿ ಈವರೆಗೆ ಪೋಡಿಯಾಗಿರುವ ಜಮೀನುಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಯಾಗಬೇಕು’ಎಂದು ಮಾದಿಗ ದಂಡೋರ ರಾಜ್ಯ ಸಮಿತಿ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಒತ್ತಾಯಿಸಿದರು.

ತಾಲ್ಲೂಕು ಮಾದಿಗ ದಂಡೋರ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

’ತಾಲ್ಲೂಕು ಪೋಡಿ ಮುಕ್ತವಾಗಬೇಕು. ಈ ಹಿಂದೆ ನಡೆದ ಕಂದಾಯ ಅದಾಲತ್‌ನಲ್ಲಿ ಪಡೆದ ದೂರುಗಳೇ ಬೇರೆ, ಪ್ರಸ್ತುತ ಪೋಡಿಯಾಗಿರುವ ಜಮೀನು ಬೇರೆ. 1961 ರಿಂದ ಸ್ವಾಧೀನದಲ್ಲಿರುವ ದಲಿತರ, ಹಿಂದುಳಿದ ವರ್ಗಗಳ ಅನೇಕ ಕುಟುಂಬಗಳ ಜಮೀನು ಈವರೆಗೆ ಪೋಡಿಯಾಗಿಲ್ಲ’ ಎಂದರು.

‘ಭೂಮಿ ಖರೀದಿಸುತ್ತಿರುವ ಮಾಫಿಯಾಗಳ ಪೋಡಿ ಕ್ಷಣ ಮಾತ್ರದಲ್ಲಿ ಆಗುತ್ತಿದೆ. ಆದರೆ, ಅನೇಕ ವರ್ಷಗಳಿಂದ ಜಮೀನು ಸ್ವಾಧೀನ ಹೊಂದಿರುವ ಸಾಮಾನ್ಯ ಜನರ ಭೂಮಿ ಬೇಗ ಪೋಡಿಯಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈ ರೀತಿಯಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಪುರಸಭೆ ವ್ಯಾಪ್ತಿಯಲ್ಲಿ 5 ಕಿ.ಮೀ ಒಳಗೆ, ನಗರಪಾಲಿ‌ಕೆ ವ್ಯಾಪ್ತಿಯಲ್ಲಿ 18 ಕಿ.ಮೀ. ಒಳಗಡೆ ರೈತರು ಅನೇಕ ವರ್ಷಗಳಿಂದ ಸ್ವಾಧೀನದಲ್ಲಿರುವ ಕೃಷಿ ಭೂಮಿಗೆ ಸಾಗುವಳಿ ಹಕ್ಕು ಪತ್ರ ನೀಡಲು ಸರ್ಕಾರ ನಿಷೇಧಿಸಿದೆ. ಇದನ್ನು ರದ್ದುಗೊಳಿಸಬೇಕು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ. 17 ರಂದು ತಾಲ್ಲೂಕು ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ಮಾದಿಗ ದಂಡೋರ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಜಿ.ಮಾರಪ್ಪ ಮಾತನಾಡಿ, ’ಮಾದಿಗ ಸಮುದಾಯದ ಮಿಸಲಾತಿಗಾಗಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದ್ದೆವು. ಅವರು ಮೂರು ತಿಂಗಳು ಕಾಲಾವಕಾಶ ಕೇಳಿ ಭರವಸೆ ನೀಡಿದ್ದರು. ಕಾಲಾವಧಿ ಮುಗಿದು ತಿಂಗಳಾದರೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಜನಸಾಮಾನ್ಯರು ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯ. ಸಾಧ್ಯವಾದರೆ ಮನವಿಯನ್ನು ತಿರಸ್ಕರಿಸಬೇಕು. ಇಲ್ಲವಾದರೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕು’ ಎಂದರು.

ಸಮಿತಿ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ತಾಲ್ಲೂಕು ಘಟಕ ಅಧ್ಯಕ್ಷ ಕದುರಪ್ಪ, ಉಪಾಧ್ಯಕ್ಷ ರಾದ ಬಾಬು, ವೆಂಕಟೇಶ್, ದೇವರಾಜ್, ಪ್ರಧಾನ ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.