ADVERTISEMENT

ಭೂಮಿ ಉಳಿಸಲು ಸ್ವಾಮೀಜಿಗೆ ಮನವಿ

ಸಿ.ಎಂ ಜೊತೆ ಶೀಘ್ರ ಚರ್ಚೆ: ನಿರ್ಮಲಾನಂದನಾಥ ಶ್ರೀ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:06 IST
Last Updated 28 ಅಕ್ಟೋಬರ್ 2022, 7:06 IST
ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು   

ವಿಜಯಪುರ (ಬೆಂ.ಗ್ರಾಮಾಂತರ): ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಬುಧವಾರ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ
ಸ್ವಾಮೀಜಿ ಅವರನ್ನು ಭೇಟಿ ಮಾಡಿ ಭೂಮಿ ಉಳಿಸಿಕೊಡಲು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಸಮೀಪದ ಆಂಜನೇಯಸ್ವಾಮಿ ದೇಗುಲದ ಬಳಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ಚನ್ನರಾಯಪಟ್ಟಣದಲ್ಲಿ 206 ದಿನಗಳಿಂದ ನಡೆಯುತ್ತಿರುವ ಹೋರಾಟ ಹಾಗೂ ಇದುವರೆಗೂ ಆಗಿರುವ ಬೆಳವಣಿಗೆ ಕುರಿತು ವಿವರಿಸಿದರು.

ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಮತ್ತು ತೋಟಗಾರಿಕೆ ಭೂಮಿಯನ್ನು ಕೈಗಾರಿಕಾ ವಲಯವನ್ನಾಗಿ ಮಾರ್ಪಡಿಸಲು ಸರ್ಕಾರ ಮುಂದಾಗಿದೆ. ರೈತರಿಂದ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.

ADVERTISEMENT

‘ಶೇ 85ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಸರ್ಕಾರ ಸ್ವಇಚ್ಛೆಯಿಂದ ಭೂಮಿ ಕೊಡುವ ರೈತರಿಂದ ಮಾತ್ರ ಸ್ವಾಧೀನಪಡಿಸಿಕೊಳ್ಳುತ್ತೇವೆ. ಉಳಿದವರಿಂದ ಭೂಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡುತ್ತಿದೆ. ಆದರೆ, ಲಿಖಿತ ರೂಪದಲ್ಲಿ ನೀಡಲು ಒಪ್ಪುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಸರ್ಕಾರ ಫಲವತ್ತಾದ ಭೂಮಿ ಕಿತ್ತುಕೊಂಡರೆ ನೂರಾರು ಕುಟುಂಬಗಳು ಎಲ್ಲಿಗೆ ಹೋಗಬೇಕು. ಈಗಾಗಲೇ, ಮೊದಲ ಹಂತದಲ್ಲಿ ಭೂಮಿ ಕೊಟ್ಟಿರುವ ರೈತರು ಕೆಲಸ ಇಲ್ಲದೆ ಪರಿಹಾರದ ರೂಪದಲ್ಲಿ ಬಂದಿರುವ ಹಣವನ್ನು ಖರ್ಚು ಮಾಡಿಕೊಂಡು ಅಲೆಯುತ್ತಿದ್ದಾರೆ. ಕಾರ್ಖಾನೆ ಮುಂದೆ ಗೇಟು ಕಾಯುವ ಕೆಲಸ ಮಾಡುತ್ತಿದ್ದಾರೆ. ಈಗ ಭೂಮಿ ಕೊಟ್ಟರೆ ನಮಗೂ ಇದೇ ಸ್ಥಿತಿ ಬರುತ್ತಿದೆ’ ಎಂದು ಆತಂಕ ತೋಡಿಕೊಂಡರು.

ರೈತರ ಮನವಿ ಆಲಿಸಿದ ಸ್ವಾಮೀಜಿ, ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡರೆ ಈ ಭಾಗದ ಕೃಷಿಗೆ ಪೆಟ್ಟು ಬೀಳಲಿದೆ. ಆಹಾರದ ಕೊರತೆ ತಲೆದೋರಲಿದೆ. ಈ ಕುರಿತು ಶೀಘ್ರವೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ರೈತ ಮುಖಂಡರಾದ ಮಾರೇಗೌಡ, ಕಾರಹಳ್ಳಿ ಶ್ರೀನಿವಾಸ್, ನಲ್ಲಪ್ಪನಹಳ್ಳಿ ನಂಜಪ್ಪ, ಸಿ. ನಾರಾಯಣಸ್ವಾಮಿ, ವೆಂಕಟರಮಣಪ್ಪ, ಮುಕುಂದ್, ರಾಮಾಂಜಿನಪ್ಪ, ನಾರಾಯಣಮ್ಮ, ರಮೇಶ್, ಲೋಕೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.