ADVERTISEMENT

16 ಸಾವಿರ ಜಾನುವಾರುಗಳಿಗೆ ಲಸಿಕೆ

ಅ.25ರ ವರೆಗೆ ಕಾಲು ಬಾಯಿ ಲಸಿಕೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 14:46 IST
Last Updated 1 ಅಕ್ಟೋಬರ್ 2023, 14:46 IST
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿಯಲ್ಲಿ ಎಮ್ಮೆಗೆ ಕಾಲು ಬಾಯಿ ರೋಗದ ಲಸಿಕೆ ನೀಡಲಾಯಿತು
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿಯಲ್ಲಿ ಎಮ್ಮೆಗೆ ಕಾಲು ಬಾಯಿ ರೋಗದ ಲಸಿಕೆ ನೀಡಲಾಯಿತು   

ಶ್ರೀನಿವಾಸಪುರ: ಆರ್ಥಿಕ ಸಂಕಷ್ಟ ತಂದೊಡ್ಡುವ ಕಾಲುಬಾಯಿ ರೋಗದಿಂದ ಜಾನುವಾರುಗಳನ್ನು ಪಾರುಮಾಡಲು ರೈತರು ಸಹಕರಿಸಬೇಕು. ಮೂರು ತಿಂಗಳು ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ತಪ್ಪದೆ ರೋಗ ನಿರೋಧಕ ಲಸಿಕೆ ಕೊಡಿಸಬೇಕು ಎಂದು ತಾಲ್ಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ.ಎನ್.ಮಂಜುನಾಥರೆಡ್ಡಿ ಹೇಳಿದರು.

ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದದಲ್ಲಿ ಪಶುಪಾಲನಾ ಇಲಾಖೆಯಿಂದ ಭಾನುವಾರ ಏರ್ಪಡಿಸಿದ್ದ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲುಬಾಯಿ ರೋಗ ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಲ್ಲಿ ಕಾಣಿಸಿಕೊಂಡು, ರೈತರಿಗೆ ನಷ್ಟ ಉಂಟುಮಾಡುವ ಮಾರಕ ರೋಗವಾಗಿದೆ ಎಂದು ಹೇಳಿದರು.

ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಹಾಗೂ ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಶುಪಾಲಕರು ತಮ್ಮ ಅರ್ಹ ಜಾನುವಾರುಗಳಿಗೆ ತಪ್ಪದೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಕೊಡಿಸಬೇಕು. ಪಶುಪಾಲನಾ ಇಲಾಖೆಯಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 36 ಸಾವಿರ ಜಾನುವಾರು ಇದ್ದು, ಈಗಾಗಲೆ 16 ಸಾವಿರ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಶೇ.100 ರಷ್ಟು ಗುರಿ ಸಾಧಿಸಲಾಗುವುದು. ಅಕ್ಟೋಬರ್ 25ರ ವರೆಗೆ ನಾಲ್ಕನೇ ಸುತ್ತಿನ ಲಸಿಕೆ ಹಾಕುವ ಕಾರ್ಯ ಮುಂದುವರಿಯುವುದು ಎಂದು ಹೇಳಿದರು.

ಗ್ರಾಮದಲ್ಲಿ 150ಕ್ಕೂ ಹೆಚ್ಚು ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ನೀಡಲಾಯಿತು. ಮನೆ ಮನೆಗೂ ತೆರಳಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಿಸ್ತರಣಾಧಿಕಾರಿ ಡಾ.ವಿಶ್ವನಾಥ್, ಜಾನುವಾರು ಅಭಿವೃದ್ಧಿ ಅಧಿಕಾರಿ ಹನುಮಪ್ಪ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಎಂ.ರಾಮಕೃಷ್ಣ, ಸಿಬ್ಬಂದಿ ನಾಗರಾಜ್, ಮನೋಜ್ ನಾಯಕ್, ಭಾಸ್ಕರ್, ಚಂದ್ರಕಳ, ರೈತ ಆರ್.ಮಂಜುನಾಥರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.