ADVERTISEMENT

‘ಪ್ರತಿಭಾ ಪಲಾಯನ ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:32 IST
Last Updated 10 ಫೆಬ್ರುವರಿ 2020, 14:32 IST
ವನಮಹೋತ್ಸವ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌ ಸಸಿ ನೆಟ್ಟರು
ವನಮಹೋತ್ಸವ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌ ಸಸಿ ನೆಟ್ಟರು   

ಉಯಂಬಳ್ಳಿ (ಕನಕಪುರ): ‘ಇಲ್ಲಿನ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಓದಿ ವಿದ್ಯಾವಂತರಾದವರು ಬೇರೆ ದೇಶಗಳಿಗೆ ಹೋಗಿ ಅಲ್ಲಿ ಉದ್ಯೋಗ ಮಾಡುವ ಮೂಲಕ ಆ ದೇಶವನ್ನು ಅಭಿವೃದ್ಧಿಪಡಿಸಬಹುದು, ಇಲ್ಲಿಯೇ ಇದ್ದು ನಮ್ಮ ದೇಶ ಅಭಿವೃದ್ಧಿ ಪಡಿಸಬೇಕು’ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಹಳ್ಳಿ ಗ್ರಾಮ ಸ್ವರಾಜ್ಯ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಕೆಎಸ್‌ಐಟಿ ಕಾಲೇಜಿನ ಎನ್‌ಎಸ್‌ಎಸ್‌ನ ವಿಶೇಷ ವಾರ್ಷಿಕ ಶಿಬಿರದ ವತಿಯಿಂದ ಭಾನುವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

‘ನಮ್ಮ ದೇಶದ ಬುದ್ಧಿವಂತರು, ಪ್ರತಿಭಾವಂತರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ವಿದೇಶಗಳಲ್ಲಿ ದುಡಿಮೆ ಮಾಡುತ್ತಾರೆ. ನಿಮಗೆ ಹಣ ಸಿಗಬಹುದು, ಆದರೆ ನಿಮ್ಮ ಸೇವೆ ನಮ್ಮ ದೇಶಕ್ಕೆ ಸಿಗುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಗ್ರಾಮ ಸ್ವರಾಜ್ಯ ಪ್ರೌಢಶಾಲೆಯ ಅಧ್ಯಕ್ಷ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಲಕ್ಷ್ಮಣ್‌ ಮಾತನಾಡಿ, ‘ಸಿಕ್ಕಿರುವ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಇಂದು ನೀವು ತೆಗೆದುಕೊಳ್ಳುವ ಕಠಿಣ ಪರಿಶ್ರಮ ಮುಂದೆ ನಿಮ್ಮ ಜೀವನವನ್ನು ಸಂತೋಷವಾಗಿ ಇಡುತ್ತದೆ. ನಿಮ್ಮನ್ನು ದೊಡ್ಡ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ’ ಎಂದು ಸಲಹೆ ನೀಡಿದರು.

ವನಮಹೋತ್ಸವದಲ್ಲಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಶಾಲೆ ಆಡಳಿತ ಮಂಡಳಿ ಕೋಶಾಧ್ಯಕ್ಷ ಕರಿಯಪ್ಪ, ನಿರ್ದೇಶಕರಾದ ಶಿವರಾಮೇಗೌಡ, ದೊಡ್ಡಮುದ್ದಶೆಟ್ಟಿ, ಮುಖ್ಯ ಶಿಕ್ಷಕ ಅಂಕಮಾದೇಗೌಡ, ಶಾಲೆಯ ಶಿಕ್ಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.