ADVERTISEMENT

ತಾಲ್ಲೂಕಿನಾದ್ಯಂತ ಶ್ರದ್ಧಾಭಕ್ತಿಯ ವರಮಹಾಲಕ್ಷ್ಮೀ ಹಬ್ಬ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 8:15 IST
Last Updated 1 ಆಗಸ್ಟ್ 2020, 8:15 IST
ಆನೇಕಲ್‌ನ ಮನೆಯೊಂದರಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಬಾಗಿನ ಸ್ವೀಕರಿಸಿದರು
ಆನೇಕಲ್‌ನ ಮನೆಯೊಂದರಲ್ಲಿ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ಬಾಗಿನ ಸ್ವೀಕರಿಸಿದರು   

ಆನೇಕಲ್ : ತಾಲ್ಲೂಕಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಮನೆಮನೆಗಳಲ್ಲಿ ಮಹಿಳೆಯರು ಮಹಾಲಕ್ಷ್ಮೀ ದೇವಿಯನ್ನು ಕುಳ್ಳಿರಿಸಿ, ವಿಶೇಷ ಅಲಂಕಾರ ಮಾಡಿ ಬಾಗಿನ ಅರ್ಪಿಸಿದರು.

‘ವರಮಹಾಲಕ್ಷ್ಮಿಯ ಕಲಶ ಸ್ಥಾಪಿಸಿ ತಳಿರು ತೋರಣ, ಹೂವುಗಳಿಂದ ಸಿಂಗರಿಸಿ ಲಕ್ಷ್ಮೀಯನ್ನು ಪೂಜಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಮಹಿಳೆಯರು ಮನೆ ಮನೆಗಳಿಗೆ ತೆರಳಿ ಅರಿಶಿನ ಕುಂಕುಮ ಮೂಲಕ ಬಾಗಿನ ವಿನಿಮಯ ಮಾಡಿಕೊಂಡರು. ಪಟ್ಟಣದ ಚೌಡೇಶ್ವರಿ ದೇವಾಲಯ, ತಾಲ್ಲೂಕಿನ ಹುಸ್ಕೂರು ಸಮೀಪದ ಅಂದಾಪುರದ ಅಷ್ಠಲಕ್ಷ್ಮೀ ದೇವಾಲಯ, ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ದೇವಾಲಯದ ಲಕ್ಷ್ಮೀ ದೇವಾಲಯ, ಬಿದರಗುಪ್ಪೆಯ ರಥಗಾಯತ್ರಿ ದೇವಾಲಯ, ಕುಂಬಾರೂಢ ಲಕ್ಷ್ಮೀದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ಏರ್ಪಡಿಸಲಾಗಿತ್ತು.

ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿತ್ತು.

ADVERTISEMENT

ಮನೆಗಳಿಗೆ ಬಾಗಿನ ಸ್ವೀಕರಿಸಲು ತೆರಳುತ್ತಿದ್ದ ಮಹಿಳೆಯರು ಮಾಸ್ಕ್‌ ಧರಿಸಿ ಸ್ಯಾನಿಟೈಜರ್‌ಗಳೊಂದಿಗೆ ತೆರಳುತ್ತಿದ್ದರು. ಬೆಲೆಏರಿಕೆಯ ನಡುವೆಯೂ ವರಮಹಾಲಕ್ಷ್ಮೀ ಹಬ್ಬದ ಆಚರಣೆಗಾಗಿ ಗುರುವಾರದಿಂದಲೂ ಜನರು ಮಾರುಕಟ್ಟೆಯಲ್ಲಿ ಜಮಾಯಿಸಿದ್ದರು. ಶುಕ್ರವಾರ ಸಹ ಟ್ರಾಫಿಕ್‌ಜಾಮ್‌ ಉಂಟಾಗಿತ್ತು.

ಅಂಗಡಿಗಳ ತೆರವು: ತಾಲ್ಲೂಕಿನ ಜಿಗಣಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿಯೇ ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿದ್ದರು. ಆಸ್ಪತ್ರೆಗೆ ಆಂಬುಲೆನ್ಸ್‌ ಬರಲು ಕಷ್ಟವಾಗಿತ್ತು. ತಹಶೀಲ್ದಾರ್‌ ಸಿ.ಮಹಾದೇವಯ್ಯ ಅವರು ಕಾರ್ಯಾಚರಣೆ ನಡೆಸಿ ಆಸ್ಪತ್ರೆ ರಸ್ತೆಯ ಅಂಗಡಿಗಳನ್ನು ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.