ADVERTISEMENT

ಹೊಸಕೋಟೆ: ಕೋಳಿ ಮಾಂಸಕ್ಕಿಂತ ಬೀನ್ಸ್‌ ದುಬಾರಿ!

ಮಾರುಕಟ್ಟೆಯಲ್ಲಿ ಕುಸಿದ ಆವಕ * ಮಳೆ ಆಗದಿದ್ದರೆ ₹300 ಗಡಿ ದಾಟುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 14:12 IST
Last Updated 25 ಏಪ್ರಿಲ್ 2024, 14:12 IST
ಬೀನ್ಸ್‌
ಬೀನ್ಸ್‌   

ಹೊಸಕೋಟೆ: ಮಾರುಕಟ್ಟೆಯಲ್ಲಿ ಆವಕ ಕುಸಿದ ಕಾರಣ ಈ ವಾರ ಬೀನ್ಸ್‌ ಬೆಲೆ ಏಕಾಏಕಿ ಏರಿಕೆಯಾಗಿದ್ದು ಕೆ.ಜಿ. ಬೀನ್ಸ್‌ ಬೆಲೆ ₹250 ಗಡಿ ತಲುಪಿದೆ.

ಮಾರುಕಟ್ಟೆಯಲ್ಲಿ ಕೋಳಿಮಾಂಸಕ್ಕಿಂತ ಬೀನ್ಸ್‌ ದುಬಾರಿಯಾಗಿದೆ. ಕೆ.ಜಿ ಕೋಳಿ ಮಾಂಸ ₹240 ಇದ್ದರೆ, ಬೀನ್ಸ್‌ ₹250ರಂತೆ ಮಾರಾಟವಾಗುತ್ತಿದೆ.  

ಕಳೆದ ವಾರ ₹130–₹140 ಆಸುಪಾಸಿನಲ್ಲಿದ್ದ ಕೆ.ಜಿ ಬೀನ್ಸ್‌ ಈ ವಾರ ದಿಢೀರ್‌ ನೂರು ರೂಪಾಯಿ ಏರಿಕೆಯಾಗಿದೆ. ಈ ಮೊದಲು ಕೆ.ಜಿ ಲೆಕ್ಕದಲ್ಲಿ ಬೀನ್ಸ್‌ ಖರೀದಿಸುತ್ತಿದ್ದ ಗ್ರಾಹಕರು ಈಗ ಗ್ರಾಂ ಲೆಕ್ಕಕ್ಕೆ ಇಳಿದಿದ್ದಾರೆ!

ADVERTISEMENT

ಬೀನ್ಸ್‌ ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಗಜ್ಜರಿ ನೂರರ ಗಡಿ ಸಮೀಪಿಸಿದೆ. ಸೊಪ್ಪು, ಮೂಲಂಗಿ, ಬದನೆಕಾಯಿ, ಹಾಗಲಕಾಯಿ, ಬೀಟ್‍ರೂಟ್, ನವಿಲುಕೋಸು, ಬೆಂಡೆಕಾಯಿ, ಹೀರೇಕಾಯಿ, ಮೆಣಸಿನಕಾಯಿ, ಕ್ಯಾಪ್ಸಿಕಮ್, ನುಗ್ಗೇಕಾಯಿ ಸೇರಿದಂತೆ ಹೆಚ್ಚಿನ ತರಕಾರಿ ಬೆಲೆ ₹60ಕ್ಕಿಂತ ಕೆಳಗೆ ಇಳಿಯುತ್ತಿಲ್ಲ. 

ತೋಟಗಾರಿಕೆ ಬೆಳೆ, ಹೂವು, ಸೊಪ್ಪು ಮತ್ತು ತರಕಾರಿ ಬೆಳೆಯಲು ಹೆಸರುವಾಸಿಯಾದ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬರ, ಬೇಸಿಗೆ ಹಾಗೂ ನೀರಿನ ಸಮಸ್ಯೆ ಎದುರಾಗಿದ್ದರಿಂದ ತರಕಾರಿ ಉತ್ಪಾದನೆ ಕುಸಿದಿದೆ.

ಈ ಎರಡು ಜಿಲ್ಲೆಗಳಿಂದ ಬೆಂಗಳೂರಿನ ಮಾರುಕಟ್ಟೆಗೆ ಬರುತ್ತಿರುವ ತರಕಾರಿ ಕಡಿಮೆಯಾಗಿದೆ. ಚುನಾವಣೆ ಮತ್ತು ಶುಭ ಕಾರ್ಯಗಳಿಂದಾಗಿ ಬೇಡಿಕೆ ಹೆಚ್ಚಿದ ಕಾರಣ ತರಕಾರಿ, ಸೊಪ್ಪಿನ ಧಾರಣೆ ಏರಿಕೆಯಾಗಿದೆ ಎನ್ನುತ್ತಾರೆ ಮಂಡಿ ವರ್ತಕರು.

ಬೇಸಿಗೆ ಹಾಗೂ ನೀರಿನ ಸಮಸ್ಯೆ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತರಕಾರಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಬೀನ್ಸ್‌ ₹300 ದಾಟುವ ನಿರೀಕ್ಷೆ ಇದೆ ಎನ್ನುತ್ತಾರೆ ಹೊಸಕೋಟೆಯ ತರಕಾರಿ ವ್ಯಾಪಾರಿ ವೆಂಕಟೇಶ್.

ಕೆ.ಜಿ ಲೆಕ್ಕದಲ್ಲಿ ತರಕಾರಿ ಖರೀದಿ ಬಿಟ್ಟ ಮಧ್ಯಮ ವರ್ಗದ ಗ್ರಾಹಕರು ಗುಡ್ಡೆ ತರಕಾರಿಗೆ ಮೊರೆ ಹೋಗುತ್ತಿದ್ದಾರೆ. ಅದು ಕೂಡ ದುಪ್ಪಟ್ಟಾಗಿದೆ. ಕಳೆದ ವಾರ ₹10ರಷ್ಟಿದ್ದ ಗುಡ್ಡೆ ತರಕಾರಿ ಈ ವಾರ ₹20ಕ್ಕೆ ಏರಿದೆ.

ತುಮಕೂರು ನಗರದ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಬೀನ್ಸ್ ಕೆ.ಜಿ.ಗೆ ₹100–120ಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹160ರವರೆಗೂ ಏರಿಕೆಯಾಗಿದೆ.

ಈ ಬಾರಿ ಬೇಸಿಗೆಯಲ್ಲಿ ಬಿಸಿಲು ಧಗೆ ಹೆಚ್ಚಾಗಿರುವ ಕಾರಣ ಬೆಳೆ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ತೋಟದಲ್ಲಿರುವ ಫಸಲಿನಲ್ಲಿ ಇಳುವರಿ ಕುಸಿದಿದೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಷ್ಟು ಉತ್ಪನ್ನ ಮಾರುಕಟ್ಟೆಗೆ ಬರುತ್ತಿಲ್ಲ. ಈಗ ಮದುವೆ ಸೇರಿದಂತೆ ಶುಭ ಕಾರ್ಯ ನಡೆಯುತ್ತಿರುವ ಕಾರಣ ಬೀನ್ಸ್‌ಗೆ ಬೇಡಿಕೆ ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದ ಬೆಲೆ ಗಗನ ಮುಟ್ಟಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಂಡಿ ವರ್ತಕರು.

ರಾಮನಗರ ಜಿಲ್ಲೆಯಲ್ಲಿ ಕೂಡ ಬೇಸಿಗೆ ಕಾರಣ ತರಕಾರಿ ದುಬಾರಿಯಾಗಿವೆ. ಅದರಲ್ಲೂ ಬೀನ್ಸ್ ದರ ಪ್ರತಿ ಕೆ.ಜಿ.ಗೆ ₹160ಕ್ಕೆ ಏರಿಕೆಯಾಗಿದೆ. ವಾರದ ಹಿಂದೆಯಷ್ಟೇ ₹100ರಿಂದ ₹120ಕ್ಕೆ ಮಾರಾಟವಾಗುತ್ತಿದ್ದ ಬೀನ್ಸ್‌ ಇದೀಗ ಶತಕದ ಗಡಿ ದಾಟಿ ದ್ವಿಶತಕದತ್ತ ಮುನ್ನುಗ್ಗುತ್ತಿದೆ.

ಪೂರೈಕೆ ಕುಸಿತದಿಂದಾಗಿ ಕೋಲಾರ ಎಪಿಎಂಸಿಯಲ್ಲಿ ಕೆ.ಜಿ ಬಿನ್ಸ್‌ ₹180 ತಲುಪಿತ್ತು. ಜಿಲ್ಲೆಯಲ್ಲಿ ರಾಜಕೀಯ ಮತ್ತು ಶುಭ ಕಾರ್ಯ  ಹೆಚ್ಚಿದ್ದ ಕಾರಣ ಬೀನ್ಸ್‌ಗೆ ಬೇಡಿಕೆ ಉಂಟಾಗಿತ್ತು. ಹೀಗಾಗಿ ದರದಲ್ಲಿ ಭಾರಿ ಏರಿಕೆ ಕಂಡಿತ್ತು ಎನ್ನುತ್ತಾರೆ ವರ್ತಕರು.

ಹೊಸಕೋಟೆ ತಾಲ್ಲೂಕಿನ ಪಿಲ್ಲಗುಂಪೆಯಲ್ಲಿ ನಡೆಯುವ ಸಂತೆಯಲ್ಲಿರುವ ಗುಡ್ಡೆ ತರಕಾರಿ 

ಬೀನ್ಸ್‌ ಬೆಳೆ ಹೆಚ್ಚು ನೀರು ಬಯಸುತ್ತದೆ. ಬಿರು ಬೇಸಿಗೆ ನೀರಿನ ಕೊರತೆಯಿಂದ ಬೀನ್ಸ್‌ ಬೆಳೆ ಒಣಗುತ್ತಿದ್ದು ಇಳುವರಿ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ತಗ್ಗಿದೆ. ವರ್ತಕರಿಂದ ಬೇಡಿಕೆ ಹೆಚ್ಚಾದ ಕಾರಣ 15 ದಿನಗಳಿಂದ ಬೀನ್ಸ್‌ ಬೆಲೆಯಲ್ಲೂ ಹೆಚ್ಚಳವಾಗಿದೆ  -ವಿಜಯಲಕ್ಷ್ಮಿಕಾರ್ಯದರ್ಶಿಎಪಿಎಂಸಿ ಕೋಲಾರ  

ಮಾರುಕಟ್ಟೆಗೆ ಬೀನ್ಸ್‌ ಆವಕ ಕಡಿಮೆಯಾಗುತ್ತಿರುವ ಕಾರಣ ಬೆಲೆಯಲ್ಲಿ ಹೆಚ್ಚಳವಾಗಿದೆ. ಭಾನುವಾರ ಹಾಗೂ ಸೋಮವಾರದ ದರಕ್ಕೆ ಹೋಲಿಸಿದರೆ ಮಂಗಳವಾರ ಕಡಿಮೆ ಇತ್ತು. ಬುಧವಾರ ಮತ್ತೆ ಏರಿಕೆ ಕಂಡಿದೆ. -ಪುಟ್ಟರಾಜು ಎಂಎಪಿ ಮಂಡಿ ಮಾಲೀಕ 

ಯುಗಾದಿ ಹಬ್ಬದ ಬೆನ್ನಲ್ಲೇ ಬಿನ್ಸ್‌ಗೆ ಬೇಡಿಕೆ ಹೆಚ್ಚಾಯಿತು. ಜೊತೆಗೆ ಮದುವೆ ಜಾತ್ರೆ ರಥೋತ್ಸವ ಸೇರಿದಂತೆ ವಿವಿಧ ರೀತಿಯ ಶುಭ ಸಮಾರಂಭ ನಡೆಯುತ್ತಿರುವುದರಿಂದ ಹಬ್ಬಕ್ಕೆ ಮುಂಚೆ ಕೆ.ಜಿ.ಗೆ ₹100 ಇದ್ದ ಬಿನ್ಸ್ ಬಳಿಕ ₹120 ₹140 ದಾಟಿ ಇದೀಗ ₹160ಕ್ಕೆ ಬಂದು ನಿಂತಿದೆ. ಮಳೆ ಕೊರತೆಯಿಂದಾಗಿ ಬೇಡಿಕೆಗೆ ತಕ್ಕಂತೆ ಬೆಳೆ ಸಹ ಇಲ್ಲದಿರುವುದರಿಂದ ಧಾರಣೆ ಏರಿದೆ 

- ಮೊಹಮ್ಮದ್ ಶಫಿ ತರಕಾರಿ ವ್ಯಾಪಾರಿ ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.