ADVERTISEMENT

‘ಕ್ರೀಡಾ ಚಟುವಟಿಕೆಯ ವಿಡಿಯೊ ದಾಖಲು’

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ರಮೇಶಪ್ಪ ನೇತೃತ್ವದಲ್ಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 16:27 IST
Last Updated 31 ಆಗಸ್ಟ್ 2018, 16:27 IST
ಶಾಲಾ ಮಕ್ಕಳು ಪಿರಾಮಿಡ್ ಪ್ರದರ್ಶನ ನೀಡಿದರು
ಶಾಲಾ ಮಕ್ಕಳು ಪಿರಾಮಿಡ್ ಪ್ರದರ್ಶನ ನೀಡಿದರು   

ವಿಜಯಪುರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ದೈಹಿಕ ಶಿಕ್ಷಕ ಡಾ.ರಮೇಶಪ್ಪ ಅವರು ಶಾಲಾ ಮಕ್ಕಳಿಗೆ ಕಲಿಸಿರುವ ವಿವಿಧ ಬಗೆಯ ಚಟುವಟಿಕೆ
ಗಳನ್ನು ನವದೆಹಲಿಯಿಂದ ಬಂದಿದ್ದ ತಂಡ ವಿಡಿಯೊ ದಾಖಲೆಮಾಡಿತು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಅಧಿಕಾರಿಗಳು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಚಿತ್ರೀಕರಣವನ್ನು ನಡೆಸಿದರು.

ರಮೇಶಪ್ಪ ಅವರು ಮಕ್ಕಳಿಗೆ ಕಲಿಸಿರುವ ಕ್ರೀಡಾ ಚಟುವಟಿಕೆ, ಯೋಗ,ಧ್ಯಾನ, ಸೇರಿದಂತೆ ಹಲವು ಚಟುವಟಿಕೆಗಳನ್ನು ಸೆರೆ ಹಿಡಿಯಲಾಯಿತು. ಶಾಲಾ ಮಕ್ಕಳು, ನೃತ್ಯ, ಯೋಗ, ನೃತ್ಯ, ವಾಲಿಬಾಲ್, ಕಬಡ್ಡಿ, ಶಾಟ್ ಪುಟ್, ಟೆನ್ನಿಸ್ ಸೇರಿದಂತೆ ಹಲವು ಪ್ರದರ್ಶನ ನೀಡಿದರು.

ADVERTISEMENT

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ನಿರ್ದೇಶಕ ಓಂ ಶೇಗಾಲ್ ಮಾತನಾಡಿ, ಪ್ರಶಸ್ತಿಗೆ ಭಾಜನವಾಗುವುದೆಂದರೆ ಸುಲಭದ ಮಾತಲ್ಲ. ನಿರಂತರ ಪರಿಶ್ರಮ, ತಮ್ಮಲ್ಲಿರುವ ಅನೇಕ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದುಅವರನ್ನು ಪರಿಪೂರ್ಣವಾದ ವಿದ್ಯಾರ್ಥಿಗಳನ್ನಾಗಿ ಮಾಡುವ ಕಾರ್ಯ ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳು ಕೇವಲ ಕಲಿಕೆಯನ್ನಾಗಿ ತೋರಿಸದೆ ಇಲ್ಲಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವಂತಹ ಪ್ರದರ್ಶನ ನೀಡಿದ್ದಾರೆ. ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಿದ ಶಿಕ್ಷಕರು ನಿಜವಾಗಿಯೂ ಇಂತಹ ಪ್ರಶಸ್ತಿಗಳಿಗೆ ಅರ್ಹರು. ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದೇವೆ ಎನ್ನುವುದಕ್ಕಿಂತ ಸೇವೆ ದಿನಗಳಲ್ಲಿ ಮಕ್ಕಳಿಗೆ ಕಲಿಸಿದ ವಿದ್ಯೆ ಅವರಿಂದ ಎಂದಿಗೂ ಸಾಯುವುದಿಲ್ಲ. ಅದು ಚಿರಕಾಲ ನೆನಪಿನಲ್ಲಿರುತ್ತದೆ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳು ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಸಹಕಾರ ಮತ್ತು ಪ್ರೋತ್ಸಾಹದಿಂದಲೇ ಶಿಕ್ಷಕರಿಗೆ ಇಂತಹ ಗೌರವ ಸಿಕ್ಕಿದೆ. ಈ ಗೌರವ ಕೇವಲ ವಿಜಯಪುರ ಶಾಲೆಗೆ ಮಾತ್ರ ಸಿಕ್ಕಿದ ಗೌರವವಲ್ಲ; ಕರ್ನಾಟಕ ರಾಜ್ಯಕ್ಕೆ ಸಿಕ್ಕಿದ ಗೌರವ’ ಎಂದು ಮಕ್ಕಳನ್ನು ಅಭಿನಂದಿಸಿದರು.

ಛಾಯಾಗ್ರಾಹಕ ಅಮಿತ್ ದೌರಾ, ಗೋವಿಂದ್ ಗುಲ್ಯಾನಿ, ತಂಡದ ಸಹಾಯಕ ರಾಮ್, ಸಹಶಿಕ್ಷಕರಾದ ಪಿ.ಎಂ. ಕೊಟ್ರೇಶ್, ಎಂ.ಎಸ್.ನಾರಾಯಣ್, ಶೈಲಜಾ, ಮುನಿಶಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.