ವಿಜಯಪುರ (ದೇವನಹಳ್ಳಿ): ರೈತರ ಅನುಕೂಲಕ್ಕಾಗಿ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ₹2 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಮತ್ತು ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಸಮೀಪದ ಯಲುವಹಳ್ಳಿ ಮುನೇಶ್ವರಸ್ವಾಮಿ ದೇವಾಲಯದ ಸಮೀಪ ಸಣ್ಣ ನೀರಾವರಿ ಇಲಾಖೆಯಿಂದ ಚೆಕ್ ಡ್ಯಾಂ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಮಳೆಯ ನೀರು ವ್ಯರ್ಥ ಆಗುವುದನ್ನು ತಪ್ಪಿಸಲು ಚೆಕ್ ಡ್ಯಾಂ ನಿರ್ಮಾಣ ಅಗತ್ಯವಿದೆ. ಈ ಭಾಗದ ರೈತರು, ಸಾರ್ವಜನಿಕರು ಮನವಿ ಮಾಡಿದ ಬೆನ್ನೆಲ್ಲೇ ₹2 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ಮತ್ತು ಸೇತುವೆ ನಿರ್ಮಿಸಲಾಗುತ್ತಿದೆ. ಯಲುವಹಳ್ಳಿ ಮುನೇಶ್ವರ ಸ್ವಾಮಿ ದೇವಾಲಯದಿಂದ ವೆಂಕಟೇನಹಳ್ಳಿಗೆ ರಸ್ತೆ ಸಂಪರ್ಕವನ್ನು ಸಹ ಕಲ್ಪಿಸಲಾಗುವುದು ಎಂದು ತಿಳೀಸಿದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಎಂ.ವೀರಣ್ಣ, ಈ ಭಾಗದಲ್ಲಿ ಚೆಕ್ ಡ್ಯಾಂ, ಸೇತುವೆ, ರಸ್ತೆ ನಿರ್ಮಾಣ ಮಾಡುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ವೆಂಕಟೇನಹಳ್ಳಿ, ಅಂಕತಟ್ಟಿ, ವಿಜಯಪುರ ಅಮಾನಿಕೆರೆಗೆ ಸೇರಿದ ನೂರಾರು ಎಕರೆ ಕೃಷಿ ಭೂಮಿ ಇದೆ. ಎಲ್ಲ ರೈತರಿಗೂ ಸದುಪಯೋಗವಾಗಲಿದೆ ಎಂದರು.
ಹಲವು ವರ್ಷಗಳಿಂದ ರೈತರು ರಸ್ತೆ ಇಲ್ಲದೆ ಸಮಸ್ಯೆ ಎದುರಿಸಿದ್ದಾರೆ. ರೈತರು ಬೆಳೆ ಸಾಗಾಟ ಮಾಡಲು ತೊಂದರೆ ಅನುಭವಿಸಿದ್ದಾರೆ. ಜೋರಾಗಿ ಮಳೆ ಸುರಿದಾಗ ನೀರಿನ ಮಟ್ಟ ಏರಿಕೆಯಿಂದ ಈ ಭಾಗದ ಮಕ್ಕಳು ಶಾಲೆಗೆ ತೆರಳಲು ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಸಚಿವರ ಗಮನಕ್ಕೆ ತಂದಾಗ ಬೇಡಿಕೆಗೆ ಸ್ಪಂದಿಸಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್, ಸದಸ್ಯರಾದ ವಿ.ನಂದ್ ಕುಮಾರ್, ಬೈರೇಗೌಡ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವೀರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚಿನ್ನಪ್ಪ, ಗೊಡ್ಲುಮುದ್ದೇನಹಳ್ಳಿ ಮುನಿರಾಜು, ಮಹೇಶ್, ಭಟ್ರೇನಹಳ್ಳಿ ನಾರಾಯಣಪ್ಪ, ವೀರುಪಾಕ್ಷಪ್ಪ, ಮುನಿಕೃಷ್ಣಪ್ಪ, ಸೊಣ್ಣೇಗೌಡ, ಪುರ ರಾಮಕೃಷ್ಣಪ್ಪ ರೈತ ಸಂಘದ ಎಸ್.ಅಶೋಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.