
ವಿಜಯಪುರ(ದೇವನಹಳ್ಳಿ): ಕಳೆದ ಎರಡು ದಿನದಿಂದ ಕಾಣಿಸಿಕೊಂಡಿರುವ ಮಳೆಗೆ ಜಿಲ್ಲೆಯ ಹಲವೆಡೆ ಕೊಯ್ಲಿಗೆ ಬಂದಿರುವ ರಾಗಿ ಬೆಳೆ ಹಾನಿಯಾಗುತ್ತಿದ್ದು, ‘ಕೈಗೆ ಬಂದು ತುತ್ತು ಬಾಯಿ ಬರಲಿಲ್ಲ’ ಎಂಬ ನಾಣ್ಣುಡಿಯಂತಹ ಸ್ಥಿತಿ ಜಿಲ್ಲೆಯ ರಾಗಿ ಬೆಳೆಗಾರರಿಗೆ ಬಂದಿದೆ. ಮೋಡ ಕವಿದ ವಾತಾವರಣ, ತೇವಾಂಶದಿಂದ ರಾಗಿ ಫಸಲು ನೆಲಕಚ್ಚುವ ಆತಂಕ ರೈತರಲ್ಲಿ ಶುರುವಾಗಿದೆ.
ಜಿಲ್ಲೆಯ ಬಹುತೇಕ ರೈತರು ಮಳೆಯಾಧಾರಿತವಾಗಿ ರಾಗಿ ಬೆಳೆದಿದ್ದಾರೆ. ಮುಂಗಾರು ಬಿತ್ತನೆ ಸಮಯದಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿರುವ ರಾಗಿ ಬೆಳೆಗಳು ಈಗ ಕೊಯ್ಲಿಗೆ ಸಮೀಪಿಸುತ್ತಿದೆ. ತಡವಾಗಿ ಬಿತ್ತನೆ ಮಡಿದ ರಾಗಿ ಬೆಳೆಗಳಿಗೆ ಮಳೆಯ ಅಗತ್ಯವಿದೆ.
ಈ ಬಾರಿ ಸುರಿದ ಹದ ಮಳೆಯಿಂದ ಎಲ್ಲೆಡೆ ರಾಗಿ ಹೊಲಗಳು ನಳನಳಿಸುತ್ತಿದೆ. ಕೊಯ್ಲಿಗೆ ಬಂದಿರುವ ರಾಗಿ ಬೆಳೆಗಳಿಗೆ ಈಗ ಜೋರಾಗಿ ಮಳೆ ಸುರಿದರೆ ಹೆಚ್ಚಿನ ಹಾನಿಯಾಗಲಿದ್ದು, ಇದರಿಂದ ರೈತರಿಗೆ ದೊಡ್ಡಪ್ರಮಾಣದಲ್ಲಿ ನಷ್ಟವಾಗಲಿದೆ.
ಒಂದೆಡೆ ಮೋಡ ಕವಿದ ವಾತಾವರಣ, ಮಳೆ ಆಗುತ್ತಿರುವುದರಿಂದ ಬೆಳೆಯಲ್ಲಿ ತೇವಾಂಶ ಕಂಡು ಬಂದರೆ, ಮತ್ತೊಂದೆಡೆ ಕೂಲಿ ಕಾರ್ಮಿಕರ ಅಭಾವದಿಂದ ಈ ಸಮಯದಲ್ಲಿ ರಾಗಿ ಬೆಳೆ ಕೊಯ್ಲಿಗೆ ಅಡ್ಡಿ ಉಂಟಾಗಿದೆ. ರಾಗಿ ಬೆಳೆಯನ್ನು ರಕ್ಷಿಸಿಕೊಳ್ಳುವುದು ಈಗ ರೈತರಿಗೆ ಸವಾಲಿನ ಕೆಲಸವಾಗಿದೆ.
ಕೆಲ ದಿನಗಳಿಂದ ಮೋಡ, ಮಳೆ ಆಗುತ್ತಿರುವುದರಿಂದ ರೈತರು ರಾಗಿ ಕೊಯ್ಲನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡುವುದು ಒಳ್ಳೆಯದು ಎಂದು ಕೃಷಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಗಿಗೆ ಉತ್ತಮ ಬೆಂಬಲ ಬೆಲೆ ನಿಗಧಿಯಾಗಿದೆ. ಪ್ರತಿ ಕ್ವಿಂಟಲ್ ರಾಗಿಗೆ ₹4,886 ನಂತೆ ಸರ್ಕಾರ ರೈತರಿಂದ ನೇರ ಖರೀದಿ ಮಾಡುತ್ತಿದೆ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಒಂದೆರೆಡು ದಿನ ಮಳೆ ಸುರಿದಿದೆ. ಮಳೆ ಮುಂದುವರೆದರೆ ರಾಗಿ ಫಸಲು ಕೈ ಸೇರುವುದಿಲ್ಲಪ್ರತೀಶ್ ರೈತ ಮುಖಂಡ
ಈಗ ಕೊಯ್ಲು ಆರಂಭಿಸಬೇಕಿತ್ತು. ಆದರೆ ಮೋಡ ಕವಿದ ವಾತಾವರಣ ಮಳೆ ಕೂಲಿ ಕಾರ್ಮಿಕರ ಅಭಾವದಿಂದ ರಾಗಿ ಬೆಳೆ ಕೊಯ್ಲಿಗೆ ಅಡ್ಡಿಯಾಗಿದೆ.ಶಿವಣ್ಣ ರಾಗಿ ಬೆಳೆಗಾರ
ಹೊಸಕೋಟೆ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ರಾಗಿ ಬೆಳೆ ನೆಲಕ್ಕೆ ಉರುಳಿದೆ. ಇದರಿಂದ ಅನ್ನದಾತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮಳೆಯಿಂದ ನೆಲ ಕಚ್ಚಿದ್ದ ರಾಗಿ ತೆನೆಗೆ ಮುಂದಿನ ದಿನಗಳಲ್ಲೂ ಮಳೆ ಸುರಿದರೆ ಕಾಳು ನೆಲೆಕ್ಕೆ ಉದುರಿ ಹೋಗುತ್ತದೆ. ಕೊಳೆತು ಹೋಗುವ ಸಂಭವವು ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿ ಪ್ರಸ್ತಕ ಸಾಲಿನಲ್ಲಿ 10 ಸಾವಿರ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶದಲ್ಲಿ, 215 ಹೆಕ್ಟೇರ್ ನೀರಾವರಿ ಭೂಮಿಯಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಸುಮಾರು 500 ಏಕರೆಗಳಲ್ಲಿ ಮಾತ್ರ ಅವಧಿಗೂ ಮೊದಲೇ ಬಿತ್ತನೆ ಮಾಡಿದ್ದರಿಂದ ಕಟಾವು ಹಂತಕ್ಕೆ ಬಂದಿತ್ತು. ಆದರೆ ಕಳೆದ ತಿಂಗಳು ಸುರಿದ ಮಳೆಗೆ ಅದು ಸಹ ನೆಲ ಕಚ್ಚಿತ್ತು. ಆದರೆ ಬೆಳೆ ನಷ್ಟ ಆಗಿರಲಿಲ್ಲ. ಎರಡು ದಿನದ ಸುರಿದ ಮಳೆ ರಾಗಿಯಲ್ಲಿ ತೇವಾಂಶ ಹೆಚ್ಚುವಂತೆ ಮಾಡಿದೆ.
ಇನ್ನುಳಿದ ಸುಮಾರು 9,000 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ರಾಗಿ ಬೆಳೆಗೆ ಮಳೆ ಬಾರದಿದ್ದರೆ ನಷ್ಟ ಆಗುವ ಸಾಧ್ಯತೆ ದಟ್ಟವಾಗಿದೆ.
ತಾಲ್ಲೂಕಿನಲ್ಲಿ ಮಳೆಯಿಂದ ರಾಗಿ ನೆಲಕಚ್ಚಿ ನಷ್ಟವಾಗುತ್ತಿದೆ. ಇಲ್ಲವೇ ಮಳೆ ಬಾರದೇ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಷ್ಟಕ್ಕಿಡಾಗುವ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ರೈತರು ಒತ್ತಾಯಿಸಿತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.