ADVERTISEMENT

ಚಿತ್ರರಂಗಕ್ಕೆ ಮೆರುಗು ತಂದುಕೊಟ್ಟ ವಿಷ್ಣುವರ್ಧನ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:05 IST
Last Updated 18 ಸೆಪ್ಟೆಂಬರ್ 2020, 14:05 IST
ವಿಜಯಪುರದ ಗಾಂಧಿಚೌಕದಲ್ಲಿರುವ ವಿಷ್ಣುವರ್ಧನ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮದಿನ ಆಚರಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು
ವಿಜಯಪುರದ ಗಾಂಧಿಚೌಕದಲ್ಲಿರುವ ವಿಷ್ಣುವರ್ಧನ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮದಿನ ಆಚರಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು   

ವಿಜಯಪುರ: ‘ಪಂಚಭಾಷೆಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮೆರಗು ತಂದುಕೊಟ್ಟ ನಟ ವಿಷ್ಣುವರ್ಧನ್ ಅವರ ಆದರ್ಶಮಯ ಜೀವನ ಯುವಕರಿಗೆ ದಾರಿದೀಪ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿ ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಕನ್ನಡ ಚಿತ್ರರಂಗದಲ್ಲಿ 1972ಕ್ಕೆ ವಂಶವೃಕ್ಷ ಚಿತ್ರದ ಮೂಲಕ ಆರಂಭವಾದ ಅವರ ಸಿನಿ ಪಯಣ ಆಪ್ತರಕ್ಷಕ ಸಿನಿಮಾದಲ್ಲಿ ಅಂತ್ಯಗೊಂಡಿದ್ದು, ಒಟ್ಟು 201 ಚಿತ್ರಗಳು, ಹಿಂದಿ ಭಾಷೆಯಲ್ಲಿ 4, ತಮಿಳಿನಲ್ಲಿ 6, ತೆಲುಗು 4, ಮಲಯಾಳಂ 3 ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿಯನ್ನು ಗಳಿಸಿದ್ದರು. ಸಂಪತ್ ಕುಮಾರನಾಗಿ ಚಿತ್ರರಂಗಕ್ಕೆ ಕಾಲಿಟ್ಟು ಬಂದಿದ್ದ ಹುಡುಗನಿಗೆ ವಿಷ್ಣುವರ್ಧನ್ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. 1979ರಲ್ಲೆ ಇವರಿಗೆ ಸಾಹಸಸಿಂಹ ಎಂಬ ಬಿರುದು ಬಂದಿತ್ತು. ಕನ್ನಡ ಚಿತ್ರರಂಗದಲ್ಲೆ 14 ಚಿತ್ರಗಳಲ್ಲಿ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ. ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ಎಂಬ ಬಿರುದುಗಳನ್ನು ಪಡೆದಿದ್ದರು. ಅವರಿಗೆ ಸ್ಮಾರಕ ನಿರ್ಮಾಣಕ್ಕೆ ಈಗ ಆರಂಭ ಮಾಡಿರುವುದು ಸಂತಸ ತಂದಿದೆ’ ಎಂದರು.

ADVERTISEMENT

ಸಾಹಿತಿ ವಿ.ಎನ್.ರಮೇಶ್ ಮಾತನಾಡಿ, ‘ದೇಶದ ಎಲ್ಲಾ ಭಾಷೆಗಳಲ್ಲಿ ಉತ್ತಮ ಲಿಪಿಯನ್ನು ಹೊಂದಿರುವ ಕನ್ನಡ ಭಾಷೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ವಿಷ್ಣುವರ್ಧನ್ ಅವರ ಜೀವನ ಶೈಲಿ ಎಲ್ಲಾ ನಟರಿಗೂ ಆದರ್ಶವಾಗಬೇಕು. ಮಹಾನ್ ನಿರ್ದೇಶಕರಿಂದ ಅತ್ಯುತ್ತಮ ನಟನಾಗಿ ರೂಪುಗೊಂಡಿದ್ದ ಅವರು ಈ ನಾಡಿನ ಆಸ್ತಿಯಾಗಿದ್ದಾರೆ. ಅವರ ನೆನಪುಗಳು ಜನರ ಮನಸ್ಸಿನಿಂದ ಹೊರಗೆ ಹೋಗಿಲ್ಲ’ ಎಂದರು.

ಕಸಾಪ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಿ.ಮುನಿಯಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್, ಪರಮೇಶಯ್ಯ, ಕಸಾಪ ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಪ್ರಧಾನ ಕಾರ್ಯದರ್ಶಿ ಮುನಿವೆಂಕಟರಮಣಪ್ಪ, ಎಂ.ವಿ.ನಾಯ್ಡು, ನಾರಾಯಣಸ್ವಾಮಿ, ಮುನಿರಾಜು, ಚನ್ನರಾಯಪಟ್ಟಣ ವೆಂಕಟರಮಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.