ADVERTISEMENT

‘ವಿಶ್ವಾಸ್‌ ಯುವಕರಿಗೆ ಮಾದರಿ’

ದೇವನಹಳ್ಳಿ ಪುರಸಭೆ ಆಡಳಿತ ಕಚೇರಿಯಲ್ಲಿ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:59 IST
Last Updated 19 ಡಿಸೆಂಬರ್ 2018, 12:59 IST
ವಿಶ್ವಾಸ್‌ ಅವರನ್ನು ಅಭಿನಂದಿಸಿದ ಗಣ್ಯರು
ವಿಶ್ವಾಸ್‌ ಅವರನ್ನು ಅಭಿನಂದಿಸಿದ ಗಣ್ಯರು   

ದೇವನಹಳ್ಳಿ: ಅಂತರರಾಷ್ಟ್ರೀಯ ಪ್ಯಾರಾ ಈಜು ಕ್ರೀಡಾಪಟು ವಿಶ್ವಾಸ್‌ಗೆ ನ್ಯಾಷನಲ್ ರೋಲ್ ಮಾಡಲ್ ಪ್ರಶಸ್ತಿ ಧಕ್ಕಿರುವುದು ಶ್ಲಾಘನೀಯ ಎಂದು ಪುರಸಭೆ ಅಧ್ಯಕ್ಷ ಎಂ.ಮೂರ್ತಿ ತಿಳಿಸಿದರು.

ಇಲ್ಲಿನ ಪುರಸಭೆ ಆಡಳಿತ ಕಚೇರಿಯಲ್ಲಿ ಕ್ರೀಡಾಪಟು ವಿಶ್ವಾಸ್‌ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ‘ಎಲ್ಲ ಅಂಗಗಳು ಸರಿಯಾಗಿ ಕೆಲಸ ಮಾಡುತ್ತಿದ್ದವರೂ ಮಾಡದ ಸಾಧನೆಯನ್ನು ವಿಶ್ವಾಸ್ ಮಾಡಿ ತೋರಿಸಿದ್ದಾರೆ. ಅವರ ಜೀವನ ಯುವಕರಲ್ಲಿ ವಿಶ್ವಾಸ ಮೂಡಿಸುತ್ತದೆ. ಅವರ ಶಕ್ತಿ ಏನು ಎಂದು ಅವರ ಗಳಿಸಿರುವ ಪದಕಗಳು ‌ಪುಷ್ಟೀಕರಿಸುತ್ತವೆ’ ಎಂದು ಹೇಳಿದರು.

‘ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅಂಗವಿಕಲರನ್ನು ಸಮಾಜ ಗೌರವಿಸಬೇಕು. ಪೋಷಕರು ನಿರ್ಲಕ್ಷ್ಯ ಮಾಡಬಾರದು. ಅವರ ಸಾಧನೆಗೆ ಬೆನ್ನುತಟ್ಟಿ ಪ್ರೋತ್ಸಾಹ ನೀಡಬೇಕು. ಅಂಗವಿಕಲರಲ್ಲಿ ಜಾತಿ, ಧರ್ಮದ ಕೀಳು ಭಾವನೆ ತರಬಾರದು. ಕ್ರೀಡಾಪಟು ವಿಶ್ವಾಸ ಸಮಾಜಕ್ಕೆ ಮಾದರಿಯಾಗಿದ್ದಾರೆ’ ಎಂದರು.

ADVERTISEMENT

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಶ್ವಾಸ್, ‘ಹುಟ್ಟಿದ 10ನೇ ವರ್ಷಕ್ಕೆ ವಿದ್ಯುತ್ ಅವಘಡದಲ್ಲಿ ಎರಡು ಕೈ ಕಳೆದುಕೊಂಡೆ. ಸ್ನೇಹಿತರ, ಶಿಕ್ಷಕರು ಹಾಗೂ ಪೋಷಕರು ಸಹಕಾರ ಪ್ರೋತ್ಸಾಹ ನೀಡಿ ಅತ್ಮಸ್ಥೈರ್ಯ ತುಂಬಿದರು. ಅಲ್ಲಿಂದ ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ಸಾಧ್ಯವಾಗಿದೆ’ ಎಂದರು.

ಪುರಸಭೆ ಉಪಾಧ್ಯಕ್ಷೆ ಅಶಾರಾಣಿ, ಪುರಸಭೆ ಸದಸ್ಯರಾದ ಜಿ.ಎ.ರವೀಂದ್ರ, ಬೇಕರಿ ಮಂಜುನಾಥ್, ನಾಮಿನಿ ಸದಸ್ಯ ಶ್ರೀಧರ್, ಶ್ರೀ ವೇಣುಗೊಪಾಲಸ್ವಾಮಿ ಒಳಾಂಗಣ ಕ್ರೀಡಾಂಗಣ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರಭಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.