
ವಿಜಯಪುರ (ದೇವನಹಳ್ಳಿ): ಇಲ್ಲಿನ ಪುರಸಭೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಸಭೆಗೆ ಬುಧವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರಿಗೆ ಪುರಸಭೆಯ ಹಲವು ಸದಸ್ಯರು ಸಮಸ್ಯೆಯ ಸುರಿಮಳೆ ಸುರಿಸಿದರು.
ಪಟ್ಟಣದ ಪುರಸಭೆಗೆ 100 ವರ್ಷ ತುಂಬಿದರೂ ಸುಸಜ್ಜಿತ ಕಟ್ಟಡ ಇಲ್ಲದೆ ಹಲವು ಸಮಸ್ಯೆ ಎದುರಿಸುವಂತಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಹಲವು ಸದಸ್ಯರು ಮನವಿ ಮಾಡಿದರು.
ಪುರಸಭೆಗೆ 105 ವರ್ಷಗಳ ಇತಿಹಾಸವಿದೆ. ಇಂತಹ ಪುರಾತನ ಪುರಸಭೆಗೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕಿದೆ. ಪುರಸಭೆಯಲ್ಲಿ ಕೆಲಸ ಮಾಡಲು ನೌಕರರ ಕೊರತೆ ಇದೆ. ನೌಕರರನ್ನು ನೇಮಕ ಮಾಡುವಂತೆ ವಿ.ನಂದಕುಮಾರ್ ಮನವಿ ಮಾಡಿದರು.
ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಎಲ್ಲೆಂದರಲ್ಲಿ ಮ್ಯಾನ್‍ಹೋಲ್ ಗಳ ಮೂಲಕ ಕೊಳಚೆ ನೀರು ಹರಿಯುತ್ತಿರುತ್ತವೆ. ಇದರಿಂದ ಸಾರ್ವಜನಿಕರಿಂದ ನಾವು ತೀವ್ರ ಆಕ್ರೋಶಕ್ಕೆ ಗುರಿಯಾಗುತ್ತಿದ್ದೇವೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಹೇಳಿದರು.
ಪಟ್ಟಣದಲ್ಲಿ ಪುರಸಭೆಗೆ ಸೇರಿದ ಬಹಳಷ್ಟು ಆಸ್ತಿಗಳನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ಸ್ವಾಧೀನಕ್ಕೆ ಪಡೆದುಕೊಂಡು ತಡೆಗೋಡೆ ನಿರ್ಮಿಸಿ ಪುರಸಭೆ ಆಸ್ತಿಯನ್ನು ಉಳಿಸಬೇಕೆಂದು ಪುರಸಭೆ ಸದಸ್ಯ ಸಿ.ಎಂ.ರಾಮು ತಿಳಿಸಿದರು.
ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಪುರಸಭೆಗೆ ಸೇರಿರುವ ಜಾಗದಲ್ಲಿ, ಅನಧಿಕೃತವಾಗಿ ಕಡಪ ಕಲ್ಲುಗಳನ್ನು ಇಟ್ಟುಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ, ಪುರಸಭೆಗೆ ಆದಾಯ ಬರುವಂತೆ ಮಾಡಿಕೊಳ್ಳಬೇಕು ಎಂದು ಸದಸ್ಯ ಬೈರೇಗೌಡ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಪೊಲೀಸ್ ಬಂದೋಬಸ್ತ್ ನಲ್ಲಿ ಪುರಸಭೆಯ ಒತ್ತುವರಿ ಜಾಗಗಳನ್ನು ಸ್ವಾಧೀನಕ್ಕೆ ಪಡೆದುಕೊಂಡು ಕಾಂಪೌಂಡ್ ನಿರ್ಮಿಸಿ, ನಾಮಫಲಕ ಅಳವಡಿಸಲಾಗುವುದು. ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಪುರಸಭೆ ಜಾಗದಲ್ಲಿರುವ ಕಡಪ ಕಲ್ಲುಗಳನ್ನು ಕೂಡಲೇ ತೆರವುಗೊಳಿಸುವಂತೆ ಮುಖ್ಯಾಧಿಕಾರಿ ಸತ್ಯನಾರಾಯಣ್‍ಗೆ ಸೂಚಿಸಿದರು.
ಪುರಸಭೆ ಅಗತ್ಯವಿರುವ ನೌಕರರನ್ನು ದೇವನಹಳ್ಳಿಯಿಂದ ನಿಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಕಾಯಂ ನೌಕರರ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಪುರಸಭೆಯ ಅಧಿಕಾರಿಗಳಿಗೆ ಸಾಥ್ ನೀಡಬೇಕು. ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಿ, ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಮತಗಟ್ಟೆಯ ಅಧಿಕಾರಿಗಳು, ಸಿಬ್ಬಂದಿ ತುಂಬಾ ಜಾಗ್ರತೆಯಿಂದ ಕೆಲಸ ಮಾಡಬೇಕು, ಸೇರ್ಪಡೆ, ತೆಗೆಯುವಂತಹವುಗಳನ್ನು ಎಚ್ಚರಿಕೆಯಿಂದ ಮಾಡಬೇಕು. ಹೊಸ ಸೇರ್ಪಡೆಗಳಿಗೆ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.