ADVERTISEMENT

‘ತಂಬಾಕಿನಿಂದ ಸಮಾಜದ ಸ್ವಾಸ್ಥ್ಯ ನಾಶ’

ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 12:38 IST
Last Updated 26 ಮಾರ್ಚ್ 2019, 12:38 IST

ದೇವನಹಳ್ಳಿ: ‘ಸಮಾಜದ ಸ್ವಾಸ್ಥ್ಯ ಹಾಳು ಮಾಡುವಲ್ಲಿ ತಂಬಾಕು ಕಾರಣವಾಗಿದೆ. ಹಾಗಾಗಿಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸಬೇಕು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಕೊಟ್ರೇಶ್ ಹೇಳಿದರು.

ದೇವನಹಳ್ಳಿ ತಾಲ್ಲೂಕು, ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಟ್ಪಾ-2003ರ ಕಾಯ್ದೆ ಸೆಕ್ಷನ್4 ಮತ್ತು 6ಬಿ ಯಂತೆ ನಿಗದಿತ ನಾಮಫಲಕಗಳನ್ನು ಶಾಲೆಯ ಪ್ರವೇಶ ದ್ವಾರದಲ್ಲಿ ಅಳವಡಿಸಬೇಕು ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದರು. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ದಾಳಿ ತಂಡಕ್ಕೆ ರಕ್ಷಣೆ ನೀಡುವುದು ಹಾಗೂ 6ಬಿ ಅನುಷ್ಠಾನಕ್ಕಾಗಿ ಶಾಲಾ ಸಿಬ್ಬಂದಿಗೆ ಸಹಕರಿಸಬೇಕು ಎಂದು ಪೊಲೀಸ್ ಇಲಾಖೆಗೂ ಸೂಚಿಸಿದರು.

ADVERTISEMENT

‘ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಬಾಕು ಮಾರುವ ಅಂಗಡಿಗಳಿಗೆ ಪರವಾನಗಿ ಅಥವಾ ನವೀಕರಣ ನೀಡುವಾಗ ಷರತ್ತುಗಳಲ್ಲಿ ಕೋಟ್ಪಾ-2003ರ ಕಾಯ್ದೆ ಸೆಕ್ಷನ್ 4, 5, 6 ಮತ್ತು 7 ಗಳನ್ನು ಸೇರಿಸಿ ಆದೇಶಿಸಬೇಕು’ ಎಂದು ನಗರಾಭಿವೃದ್ಧಿ ಕೋಶ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕೋಟ್ಪಾ-2003ರ ಕಾಯ್ದೆ ಸೆಕ್ಷನ್4 ರಂತೆ ನಿಗದಿತ ನಾಮಫಲಕ ಅಳವಡಿಸಬೇಕು. ಎಲ್ಲ ತಾಲ್ಲೂಕುಗಳಲ್ಲಿ ಮಾಸಿಕ ಕನಿಷ್ಠ ಆರು ಬಾರಿ ಕೋಟ್ಪಾ-2003ರಡಿ ದಾಳಿ ನಡೆಸಬೇಕು’ ಎಂದು ತಾಲ್ಲೂಕು ಮಟ್ಟದ ತನಿಖಾ ದಳದ ತಂಡಗಳಿಗೆ ನಿರ್ದೇಶಿಸಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ದೇವನಹಳ್ಳಿ ತಾಲ್ಲೂಕನ್ನು ‘ಕೋಟ್ಪಾ ಕಾಯ್ದೆಯ ಉನ್ನತ ಅನುಷ್ಠಾನ ತಾಲ್ಲೂಕು’ ಎಂದು ಘೋಷಿಸಲು ಯೋಜನೆ ರೂಪಿಸಿ ವಿಶೇಷ ಗಮನಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕರಿಯಪ್ಪ, ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಬಿ. ಧರ್ಮೇಂದ್ರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.