ADVERTISEMENT

ಜಿಲ್ಲೆಗೆ ಬಚ್ಚೇಗೌಡ ಕೊಡುಗೆ ಏನು?

ಜಂಟಿ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂಡ ವೆಂಕಟಸ್ವಾಮಿ ವಾಗ್ದಾಳಿ 

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:24 IST
Last Updated 10 ಏಪ್ರಿಲ್ 2019, 17:24 IST
ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು
ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು   

ದೇವನಹಳ್ಳಿ: ಎರಡು ಮೂರು ಬಾರಿ ಸಚಿವರಾಗಿದ್ದ ಬಚ್ಚೇಗೌಡ ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಕಾಂಗ್ರೆಸ್ ಮುಖಂಡ ವೆಂಕಟಸ್ವಾಮಿ ವಾಗ್ದಾಳಿ ನಡೆಸಿದರು.

ಇಲ್ಲಿನ ಕನ್ನಮಂಗಲ ಗೇಟ್ ಮದಗನಕುಂಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನಾಲ್ಕು ಬಾರಿ ಶಾಸಕರಾಗಿ, ಮುಖ್ಯಮಂತ್ರಿಯಾಗಿ, ಎರಡು ಬಾರಿ ಸಂಸದರಾಗಿ ಅಪಾರ ರಾಜಕೀಯ ಅನುಭವವನ್ನು ವೀರಪ್ಪ ಮೊಯಿಲಿ ಹೊಂದಿದ್ದಾರೆ. ಕೇಂದ್ರ ಸರ್ಕಾರದಲ್ಲಿಯೂ ಸಚಿವರಾಗಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.

ADVERTISEMENT

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಗಳು ಕೇವಲ ಪ್ರಧಾನಿ ಮೋದಿ ಮುಖ ನೋಡಿ ಮತ ನೀಡಿ ಎನ್ನುತ್ತಿದ್ದಾರೆ. ಆದರೆ, ತಮ್ಮ ಅವಧಿಯಲ್ಲಿನ ಅಭಿವೃದ್ಧಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.

ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಿದ್ದು ಯುಪಿಎ ಸರ್ಕಾರ. 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು ಮನಮೋಹನ್ ಸಿಂಗ್ ಸರ್ಕಾರ. ಪೆಟ್ರೋಲ್ ಡೀಸೆಲ್ ಸೇರಿದಂತೆ ವಿವಿಧ ವಸ್ತುಗಳ ಬೆಲೆ ದುಬಾರಿಯಾಗಿದೆ ಎಂದು ಭಾಷಣ ಮಾಡಿ ಮತದಾರ ದಿಕ್ಕು ತಪ್ಪಿಸಿ ಮೋದಿ ಪ್ರಧಾನಿಯಾದರು. ಆದರೆ, ಪ್ರಸ್ತುತ ಯಾವ ಯಾವ ವಸ್ತಗಳ ಬೆಲೆ ಯಾವ ಬೆಲೆಯಲ್ಲಿದೆ ಎಂಬುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಶ್ರೀನಿವಾಸ್ ಮಾತನಾಡಿ, ಬಿಜೆಪಿಯವರು ಮೋದಿ ಎಂದು ಹೇಳುತ್ತಾರೆ. ಮೋದಿ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು ಎಂಬುದೆ ಅರ್ಥವಾಗುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲಮನ್ನಾ ಅಂತಹ ಮಹತ್ವದ ಯೋಜನೆ ಜಾರಿ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಮೈತ್ರಿ ಸರ್ಕಾರ ಈಡೇರಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ಕಾಂಗ್ರೆಸ್ ಎಸ್ಸಿ ಘಟಕ ಜಿಲ್ಲಾ ಅಧ್ಯಕ್ಷ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ಎಸ್.ಜಿ.ಮಂಜುನಾಥ್, ಯುವ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ನಾಗೇಶ್, ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶ್ರೀರಾಮಯ್ಯ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕ ಅಧ್ಯಕ್ಷ ಅಪ್ಪಣ್ಣ, ಎಂಪಿಸಿಎಸ್ ಅಧ್ಯಕ್ಷ ಎಸ್.ಪಿ. ಮುನಿರಾಜು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಘಟಕ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೆಪಿಸಿಸಿ ಸದಸ್ಯರಾದ ಕೆ.ಪಟಾಲಪ್ಪ, ಮುನಿರಾಜು, ಮುಖಂಡರಾದ ಖುದ್ದೂಸ್, ದೊಡ್ಡಸೊಣ್ಣೆ ಮುನಿರಾಜು, ಬಿದಲೂರು ಮುನಿರಾಜು, ಶಾಂತಕುಮಾರ್, ನಂದಕುಮಾರ್, ದೇವಗಾನಹಳ್ಳಿ ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.