ADVERTISEMENT

ವಿಜಯಪುರ | ಕೆರೆಯಲ್ಲಿ ಮುಳುಗಿಸಿ ಮಹಿಳೆ ಕೊಲೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 22:30 IST
Last Updated 4 ಸೆಪ್ಟೆಂಬರ್ 2025, 22:30 IST
ವರಲಕ್ಷ್ಮೀ
ವರಲಕ್ಷ್ಮೀ   

ವಿಜಯಪುರ (ದೇವನಹಳ್ಳಿ): ಕುರಿ ಖರೀದಿಸಿದ ಬಾಕಿ ಉಳಿಸಿಕೊಂಡಿರುವ ಹಣ ಕೊಡುವುದಾಗಿ ಹತ್ತು ದಿನದ ಹಿಂದೆ ಮಹಿಳೆಯನ್ನು ಕರೆಸಿಕೊಂಡು ಚಿಕ್ಕನಹಳ್ಳಿ ಕೆರೆಯಲ್ಲಿ ಮುಳಗಿಸಿ ಸಾಯಿಸಿದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.  

ವಿಜಯಪುರದ ಪರಶುರಾಮ ನಗರದ ನಿವಾಸಿ ಮಧು (26) ಬಂಧಿತ ಆರೋಪಿ. ಇದೇ ನಗರದ ನಿವಾಸಿ ವರಲಕ್ಷ್ಮಿ(49) ಕೊಲೆಯಾದ ಮಹಿಳೆ. ಇವರು ದೇವನಹಳ್ಳಿಯಲ್ಲಿ ಮೀನುಮಾಂಸ ಮಾರಾಟ ವ್ಯಾಪಾರ ಮಾಡುತಿದ್ದರು.

ವರ್ಷದ ಹಿಂದೆ ವರಲಕ್ಷ್ಮಿ ಅವರಿಂದ ಕುರಿ ಖರೀದಿಸಿದ್ದ ಮಧು ಸ್ವಲ್ಪ ಹಣ ನೀಡಿದ್ದ. ಬಾಕಿ ಹಣ ನೀಡದೆ ಸತಾಯಿಸುತ್ತಿದ್ದ. ಬಾಕಿ ಹಣ ನೀಡುವುದಾಗಿ ಆ.26ರಂದು ಕರೆ ಮಾಡಿ ಮನೆ ಬಳಿ ಕರೆಸಿಕೊಂಡ ಆರೋಪಿ, ಮಹಿಳೆಯನ್ನು ತನ್ನ ಕಾರಿನಲ್ಲಿ ಚಿಕ್ಕನಹಳ್ಳಿ ಕೆರೆಯ ಬಳಿ ಕರೆದೊಯ್ದಿದ್ದಾನೆ.

ADVERTISEMENT

ಅಲ್ಲಿ ಇಬ್ಬರಿಗೂ ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿದೆ. ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ. ಆ.27ರಂದು ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದೆಂದು ಸಂಬಂಧಿಕರು ಆರಂಭದಲ್ಲಿ ಭಾವಿಸಿದ್ದರು. ಯಾರಿಗೂ ಕೊಲೆ ಶಂಕೆ ಬಂದಿರಲಿಲ್ಲ. 

ಆದರೆ, ವರಲಕ್ಷ್ಮಿ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಮೊಬೈಲ್ ಕಾಣೆಯಾಗಿತ್ತು. ಆಗ ಸಂಬಂಧಿಕರಿಗೆ ಅನುಮಾನ ಶುರುವಾಗಿತ್ತು. ಕೂಡಲೇ ಮನೆ ಸಮೀಪದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ.

ಆ.26 ರಂದು ಸಂಜೆ 7.20ಕ್ಕೆ ಮಧು ಕಾರಿನಲ್ಲಿ ವರಲಕ್ಷ್ಮಿ ಅವರನ್ನು ಹತ್ತಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮೃತರ ಪುತ್ರ ವರುಣ್ ವಿಜಯಪುರ ಪೊಲೀಸ್ ಠಾಣೆಗೆ ದೂರು ನೀಡಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಜೊತೆಗೆ ಆರೋಪಿ ಮಧು ಬಗ್ಗೆ ಸುಳಿವು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಧು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಪ್ರಶಾಂತ್ ಎಸ್. ನಾಯಕ್ ತಿಳಿಸಿದ್ದಾರೆ.

ಆರೋಪಿ ಮಧು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.