ADVERTISEMENT

‘ಮಹಿಳೆಯರು ಸಂಘಟಿತರಾದರೆ ಮಾತ್ರ ಉಳಿವು’

ತಾಲ್ಲೂಕು ಮಟ್ಟದ ನೂತನ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 7:59 IST
Last Updated 14 ಸೆಪ್ಟೆಂಬರ್ 2020, 7:59 IST
ಸಂಘ ಉದ್ಘಾಟನೆಯಲ್ಲಿ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು
ಸಂಘ ಉದ್ಘಾಟನೆಯಲ್ಲಿ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು   

ದೇವನಹಳ್ಳಿ: ಮಹಿಳೆಯರು ಸಂಘಟಿತರಾದರೆ ಮಾತ್ರ ಈ ಸಮಾಜದಲ್ಲಿ ಉಳಿಗಾಲ ಎಂದು ರಮಾಬಾಯಿ ಡಾ.ಭೀಮರಾವ್ ಅಂಬೇಡ್ಕರ್ ಮಹಿಳಾ ಸಂಘ ನೂತನ ತಾಲ್ಲೂಕು ಘಟಕದ ಅಧ್ಯಕ್ಷೆ ಉಷಾ ಪ್ರಕಾಶ್ ಹೇಳಿದರು.

ಇಲ್ಲಿನ ಪೂಜನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಮಟ್ಟದ ನೂತನ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ಸಮುದಾಯದಲ್ಲಿಯು ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಅವರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಬಿದ್ದಿವೆ. ಅಂಧಾನುಕರಣೆ, ಮೂಡನಂಬಿಕೆ, ಆಚರಣೆ, ಧರ್ಮದ ನೆಪದಲ್ಲಿ ಮಹಿಳೆಯರನ್ನು ನಿರ್ಲಕ್ಷ್ಯವಹಿಸಲಾಗುತ್ತಿದೆ’ ಎಂದರು.

ADVERTISEMENT

ಮಹಿಳೆಯರು ಅಕ್ಷರ ಕಲಿತರೆ ಮಾತ್ರ ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಲು ಸಾಧ್ಯ. ತಮ್ಮ ಮಕ್ಕಳನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು. ದೇಶದ ಆದರ್ಶ ನಾಯಕರೆಲ್ಲರು ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಿದವರು. ಅಕ್ಷರದವ್ವ ಸಾವಿತ್ರಿಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ ಎಂಬುದನ್ನು ಮಹಿಳೆಯರು ಮರೆಯಬಾರದು’ ಎಂದು ಹೇಳಿದರು .

‘ಮಹಿಳಾ ಸಂಘಟನೆ ಬಲಿಷ್ಠವಾಗಿ ವಿಸ್ತಾರಗೊಳ್ಳಬೇಕು. ಕಾನೂನು ಮತ್ತು ಶಿಕ್ಷಣದ ಅರಿವು, ಸರ್ಕಾರದಿಂದ ಮಹಿಳೆಯರಿಗಾಗಿ ಜಾರಿಯಾಗಿರುವ ಯೋಜನೆಗಳು ಪ್ರತಿ ಮನೆಗೆ ತಲುಪಬೇಕು. ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ಪರಿಸರ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಸ್ವಾವಲಂಬಿ ಜೀವನಕ್ಕೆ ಒತ್ತು ನೀಡುವುದು ಸಂಘಟನೆ ಉದ್ದೇಶ’ ಎಂದು ಹೇಳಿದರು.

ಮುಖಂಡ ಪ್ರಕಾಶ್, ಸಂಘದ ಉಪಾಧ್ಯಕ್ಷೆ ವೆಂಕಟಲಕ್ಷಮ್ಮ, ಕಾರ್ಯಾಧ್ಯಕ್ಷೆ ಮೀನಾ, ಕಾರ್ಯದರ್ಶಿ ಪುಷ್ಪಾ, ಸಹಕಾರ್ಯದರ್ಶಿ ವಿಜಯಮ್ಮ, ಸಂಘಟನಾ ಕಾರ್ಯದರ್ಶಿ ಶಾಂತಮ್ಮ, ಖಜಾಂಚಿ ರಾಧಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.