ADVERTISEMENT

ವೃದ್ಧರನ್ನು ನಿರ್ಲಕ್ಷಿಸಿದರೆ ಕಾನೂನು ಕ್ರಮ: ನ್ಯಾಯಾಧೀಶರ ಎಚ್ಚರಿಕೆ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 12:58 IST
Last Updated 13 ಅಕ್ಟೋಬರ್ 2018, 12:58 IST
ಹಿರಿಯ ನಾಗರಿಕರ ದಿನಾಚರಣೆಯನ್ನು ನ್ಯಾಯಾಧೀಶ ಸುನಿಲ್ಎಸ್.ಹೊಸಮನಿ ಉದ್ಘಾಟಿಸಿದರು
ಹಿರಿಯ ನಾಗರಿಕರ ದಿನಾಚರಣೆಯನ್ನು ನ್ಯಾಯಾಧೀಶ ಸುನಿಲ್ಎಸ್.ಹೊಸಮನಿ ಉದ್ಘಾಟಿಸಿದರು   

ದೇವನಹಳ್ಳಿ: ಬದುಕಿನ ಮಾರ್ಗದರ್ಶಕರಾಗಿರುವ ಹಿರಿಯ ನಾಗರಿಕರನ್ನು ನಿರ್ಲಕ್ಷ್ಯ ಮಾಡಿದರೆ ಕಾನೂನು ರೀತಿಯ ಕ್ರಮಕ್ಕೆ ಮುಕ್ತ ಅವಕಾಶವಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ಜಿಲ್ಲಾ ನ್ಯಾಯಾಧೀಶ ಸುನಿಲ್ ಎಸ್.ಹೊಸಮನಿ ಹೇಳಿದರು.

ಇಲ್ಲಿನ ಗುರುಭವನದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ವಕೀಲರ ಸಂಘ, ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರಿ ನಿವೃತ್ತ ನೌಕರರ ಸಂಘ ಸಹಯೋಗದಲ್ಲಿ ನಡೆದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರಿಕರ ಸಮಸ್ಯೆ ಮತ್ತು ಎದುರಿಸುತ್ತಿರುವ ಸವಾಲುಗಳನ್ನು ಗಮನಿಸಿದ ವಿಶ್ವಸಂಸ್ಥೆ 1991ರಲ್ಲಿ ದಿನಾಚರಣೆ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ ಎಂದರು.

ADVERTISEMENT

ನ್ಯಾಯಾಧೀಶರ ಮೂಲಕ ಹಿರಿಯ ನಾಗರಿಕರಿಗಿರುವ ಹಕ್ಕು ಮತ್ತು ಪರಿಹಾರಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

2007ರಿಂದ ಪೋಷಕರಿಗೆ ಕಡ್ಡಾಯ ಜೀವನಾಂಶ ಮತ್ತು ಆಸ್ತಿಯಲ್ಲಿ ಹಕ್ಕು ಜಾರಿಯಾಗಿದೆ. ಆದರೂ ವೃದ್ಧಾಶ್ರಮಗಳು ಹೆಚ್ಚುತ್ತಿದೆ. ಕೋಣೆಯ ಒಂದು ಮೂಲೆಯಲ್ಲಿ ಕೂಡಿಹಾಕಿ ಸ್ವಚ್ಛಂದ ಜೀವನಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳಾ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಸೂರ್ಯಕಲಾ ಮೂರ್ತಿ ಮಾತನಾಡಿ, ಇಳಿಯ ವಯಸ್ಸಿನಲ್ಲಿ ವಿವಿಧ ರೀತಿಯ ಸಮಸ್ಯೆಗಳು ಸಹಜ, ನೆಮ್ಮದಿಯ ಜೀವನ ನಡೆಸಬೇಕಾದ ಹಿರಿಯರಿಗೆ ಸವಾಲುಗಳಿವೆ ಎಂದರು.

ಅನೇಕ ಹಿರಿಯ ನಾಗರಿಕರಿಗೆ ರಕ್ಷಣಾತ್ಮಕ ಉಚಿತ ಕಾನೂನು ನೆರವಿನ ಬಗ್ಗೆ ಮಾಹಿತಿ ಇಲ್ಲ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಬಗ್ಗೆಯೇ ಗೊತ್ತಿಲ್ಲ ಎಂದು ಹೇಳಿದರು.

ಸೌಲಭ್ಯಗಳನ್ನು ಪಡೆಯಲು ಮುಂದಾಗುವ ನಾಗರೀಕರ ಬಗ್ಗೆ ಅಧಿಕಾರಿಗಳೇ ನಿರ್ಲಕ್ಷ್ಯ, 60 ವರ್ಷಕ್ಕಿಂತ ಮೆಲ್ವಟ್ಟವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ ಎಂದರು.

ಇದರಿಂದ ಆನೇಕ ಸೌಲಭ್ಯಗಳಿವೆ ಶೇ 25 ರಷ್ಟು ಬಸ್ ಪ್ರಯಾಣದರದಲ್ಲಿ ವಿನಾಯಿತಿ ಇದೆ. ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ವಕೀಲ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಬಿ.ಎಂ.ಭೈರೇಗೌಡ, ಅಪರ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂ, ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೆ.ಮಹಾಲಿಂಗಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಎನ್.ಪ್ರಭಾಕರ್, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮಯ್ಯ, ಪ್ರಧಾನ ಕಾರ್ಯದರ್ಶಿ ಗುರುಸಿದ್ಧಯ್ಯ, ಕಾರ್ಯಾಧ್ಯಕ್ಷ ರಾಮಾಂಜಿನಪ್ಪ, ಖಜಾಂಚಿ ಅಶ್ವಥನಾರಾಯಣ, ಸದಸ್ಯ ಎಲ್.ಎಸ್ ಚಂದ್ರಪ್ಪ, ವಕೀಲರ ಸಂಘ ಉಪಾಧ್ಯಕ್ಷ ಗೋವಿಂದ ಸ್ವಾಮಿ, ಕಾರ್ಯದರ್ಶಿ ಪ್ರಭಾಕರ್, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಜಿಲ್ಲಾ ಸಮನ್ವಯಾಧಿಕಾರಿ ಉಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.