ADVERTISEMENT

ಯಲಹಂಕ: ಅಂಬೇಡ್ಕರ್‌, ಬಸವಣ್ಣ ಜಯಂತಿ

​ಪ್ರಜಾವಾಣಿ ವಾರ್ತೆ
Published 6 ಮೇ 2025, 21:07 IST
Last Updated 6 ಮೇ 2025, 21:07 IST
ಥಣಿಸಂದ್ರದಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಮತ್ತು ಬಸವಣ್ಣನವರ ಜಯಂತಿ ಆಚರಿಸಲಾಯಿತು
ಥಣಿಸಂದ್ರದಲ್ಲಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಮತ್ತು ಬಸವಣ್ಣನವರ ಜಯಂತಿ ಆಚರಿಸಲಾಯಿತು   

ಯಲಹಂಕ: ‘ಮೀಸಲಾತಿಯನ್ನು ಪಡೆದವರು ಮಾತ್ರ ಬಾಬಾ ಸಾಹೇಬ್‌ ಅಂಬೇಡ್ಕರ್‌ರವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಆದರೆ ಉಳಿದ ಸಿಂಹಪಾಲು ಸಮುದಾಯದ ಜನರು ಅವರನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ಸಾಹಿತಿ ಸುಬ್ಬು ಹೊಲೆಯಾರ್‌ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ) ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕರ ಸಂಘದ ಆಶ್ರಯದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಥಣಿಸಂದ್ರದಲ್ಲಿ ಆಯೋಜಿಸಿದ್ದ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಮತ್ತು ಬಸವಣ್ಣನವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ-ಪಂಗಡದವರನ್ನು ಸಮಾಜ ಮತ್ತು ದೇಶ ಮನುಷ್ಯರನ್ನಾಗಿ ಕಾಣುವ ಹೃದಯವಂತಿಕೆ ತೋರುತ್ತಿಲ್ಲ. ಇಂದಿಗೂ ಈ ದೇಶದಲ್ಲಿ ಬಡತನ, ಅಸ್ಪೃ ಶ್ಯತೆ, ಮತೀಯ ಮತ್ತು ಕೋಮುವಾದ ಜೀವಂತವಾಗಿದೆ’ ಎಂದರು

ADVERTISEMENT

ಪ್ರಜಾವಿಮೋಚನಾ ಚಳವಳಿ(ಸ್ವಾಭಿಮಾನ) ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ, ‘ದೇಶದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಅನ್ಯಾಯ ಮತ್ತು ಅತ್ಯಾಚಾರದ ವಿರುದ್ಧ ಜೀವನದುದ್ದಕ್ಕೂ ನಿರಂತರವಾಗಿ ಹೋರಾಟಗಳನ್ನು ಮಾಡುವ ಮೂಲಕ ಪರಿವರ್ತನೆ ತಂದಂತಹ ಮಹಾನ್‌ ಮಾನವತಾವಾದಿ ಅಂಬೇಡ್ಕರ್‌ ಅವರು ಇಂದು ಜಗತ್ತಿನ 152 ದೇಶಗಳಿಗೆ ತಲುಪಿದ್ದಾರೆ’ ಎಂದರು.

ಇದೇ ಸಂದರ್ಭದಲ್ಲಿ ಬಡಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಅಂಬೇಡ್ಕರ್‌ ಮತ್ತು ಬಸವಣ್ಣನವರ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿಟ್ಟು ಥಣಿಸಂದ್ರ-ನಾಗವಾರ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾರದಮ್ಮ, ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ) ರಾಜ್ಯ ಘಟಕದ ಅಧ್ಯಕ್ಷ ಹೆಬ್ಬಾಳ ವೆಂಕಟೇಶ್‌, ಡಾ.ಬಿ.ಆರ್‌. ಅಂಬೇಡ್ಕರ್‌ ಯುವಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌.ಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕ್ಯಾಲಸನಹಳ್ಳಿ ಶ್ರೀನಿವಾಸ್‌, ಪಿವಿಸಿ(ಸ್ವಾಭಿಮಾನ) ಯುವ ಘಟಕದ ಉಪಾಧ್ಯಕ್ಷ ಸತೀಶ್‌ ಕುಮಾರ್‌ ಕೋಲಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.