ADVERTISEMENT

ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:03 IST
Last Updated 19 ನವೆಂಬರ್ 2025, 2:03 IST
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ವೃತ್ತದಲ್ಲಿ ಮಂಗಳವಾರ ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ವೃತ್ತದಲ್ಲಿ ಮಂಗಳವಾರ ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು   

ದೊಡ್ಡಬಳ್ಳಾಪುರ: ನಗರದ ಮೂಲಕ ಹಾದು ಹೋಗಿರುವ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಮಂಗಳವಾರ ನಗರದ ಡಿ.ಕ್ರಾಸ್‌ ವೃತ್ತದಲ್ಲಿ ರಾಜ್ಯ ರೈತ ಸಂಘ, ಕನ್ನಡ ಪಕ್ಷ ಹಾಗೂ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ರಸ್ತೆ ತಡೆಯಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಹಾಗೂ ಬೈಕ್‌ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ತಡೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವ ಮೂಲಕ ರಸ್ತೆ ತಡೆಯನ್ನು ತೆರವು ಮಾಡಿದರು.

ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆ ಪ್ರತಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪೊಲೀಸರ ಹಾಗೂ ಹೆದ್ದಾರಿ ಟೋಲ್‌ ಸಂಗ್ರಹ ಮಾಡುತ್ತಿರುವುದರ ವಿರುದ್ಧ ಧಿಕ್ಕಾರ ಕೂಗಿದರು.

ADVERTISEMENT

ಹೆದ್ದಾರಿ ಬದಿಯಲ್ಲೇ ನಡೆದ ಸಭೆಯಲ್ಲಿ ಮಾತನಾಡಿದ ಪ್ರತಿಭಟನಕಾರ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್‌ನಾಯ್ಕ್‌, ಕರವೇ(ಪ್ರವಿಣ್‌ಶೆಟ್ಟಿ ಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಕಾಮಗಾರಿ ಶೇ 80ರಷ್ಟು ಮಾತ್ರ ಮುಕ್ತಾಯವಾಗಿದೆ. ಆದರೆ ಟೋಲ್‌ ಸಂಗ್ರಹ ಮಾತ್ರ ನಡೆಯುತ್ತಲೇ ಇದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಬರುವ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ, ದೊಡ್ಡಬಳ್ಳಾಪುರ ನಗರದ ಸಿದ್ದೇನಾಯಕನಹಳ್ಳಿ, ಮುತ್ತೂರು ಬಳಿ ಒಂದು ಬದಿಯಲ್ಲಿ ರಸ್ತೆಯನ್ನೇ ನಿರ್ಮಾಣ ಮಾಡಿಲ್ಲ. ಡಿವೈಡರ್‌ ನಿರ್ಮಿಸಿಲ್ಲ ಎಂದು ದೂರಿದರು.

ಮೂತ್ತೂರು, ಬಾಶೆಟ್ಟಿಹಳ್ಳಿ ಸಮೀಪ ಚರಂಡಿ ನೀರು ರಸ್ತೆಗೆ ಹರಿದು ಬರುತ್ತಿವೆ. ಹೆದ್ದಾರಿ ಬದಿಯಲ್ಲಿನ ಜನವಸತಿ ಪ್ರದೇಶಗಳ ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನೇ ಅಳವಡಿಸಿಲ್ಲ. ಡಿ.ಕ್ರಾಸ್‌ ವೃತ್ತ, ರೈಲ್ವೆ ನಿಲ್ದಾಣ ವೃತ್ತ, ಬಾಶೆಟ್ಟಿಹಳ್ಳಿ ಬಳಿ ಮೇಲುಸೇತುವೆಗಳನ್ನು ನಿರ್ಮಿಸಬೇಕು. ಪಾಲನಜೋಗಹಳ್ಳಿ ಸಮೀಪ ಸ್ಕೈವಾಕ್‌ ನಿರ್ಮಾಣ ಮಾಡಬೇಕು. ಜನದಟ್ಟಣೆ ಹೆಚ್ಚಾಗಿರುವ ಬಾಶೆಟ್ಟಿಹಳ್ಳಿ, ಡಿ.ಕ್ರಾಸ್‌, ರೈಲ್ವೆ ನಿಲ್ದಾಣ ವೃತ್ತ, ಎಪಿಎಂಸಿ ಹಾಗೂ ಪಾಲನಜೋಗಹಳ್ಳಿ ಹೆದ್ದಾರಿಯ ಎರಡೂ ಬದಿಯಲ್ಲೂ ಗ್ರೀಲ್‌ಗಳನ್ನು ನಿರ್ಮಿಸಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದರು.

ಡಿ.ಕ್ರಾಸ್‌, ಎಪಿಎಂಸಿ, ರೈಲ್ವೆ ನಿಲ್ದಾಣ ಸೇರಿದಂತೆ ನಗರ ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ರಾತ್ರಿ, ಹಗಲಿನಲ್ಲಿ ಲಾರಿಸೇರಿದಂತೆ ಇತರೆ ವಾಹನಗಳನ್ನು ನಿಲುಗಡೆ ಮಾಡದಂತೆ ಹೆದ್ದಾರಿ ಗಸ್ತು ಹಾಗೂ ಪೊಲೀಸರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡ ಸತೀಶ್‌, ಮುತ್ತೇಗೌಡ, ಶಿರವಾರ ರವಿ, ತಿಮ್ಮಯ್ಯ, ವಾಸು, ವಾಣಿಗರಹಳ್ಳಿಮುರುಳಿ, ಕನ್ನಡ ಪಕ್ಷದ ತಾಲ್ಳೂಕು ಅಧ್ಯಕ್ಷ ವೆಂಕಟೇಶ್‌, ಪರಮೇಶ್‌, ಕರವೇ ತಾಲ್ಲೂಕು ಅಧ್ಯಕ್ಷ ವೆಂಕಟೇಶ್‌, ಶಿವರಾಜ್‌ ಕುಮಾರ್‌ ಸೇನಾ ಸಮಿತಿಯ ರಮೇಶ್‌ ಇದ್ದರು.

ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ವೃತ್ತದಲ್ಲಿ ಮಂಗಳವಾರ ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿ ಅವ್ಯವಸ್ಥೆ ಖಂಡಿಸಿ ರಸ್ತೆ ತಡೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.