ADVERTISEMENT

ವಾರ್ಡ್‌ ಮರು ವಿಂಗಡಣೆ: ಕೇಶವಕೃಪಾದಲ್ಲಿ ಸಿದ್ಧವಾದ ವರದಿ- ಆರೋಪ

ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲೇ ವಾರ್ಡ್‌ಗಳ ಸಂಖ್ಯೆ ಏರಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:45 IST
Last Updated 3 ಜೂನ್ 2022, 19:45 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆ ಕರಡು ಸಿದ್ಧವಾಗಿದ್ದು, ಇದು ಬಿಬಿಎಂಪಿ ಕಚೇರಿಗೆ ಬದಲು ಕೇಶವಕೃಪಾದಲ್ಲಿ ತಯಾರಾದ ವರದಿ ಎಂಬ ಆರೋಪ ವ್ಯಕ್ತವಾಗಿದೆ.

298 ವಾರ್ಡ್‌ಗಳನ್ನು 243ಕ್ಕೆ ಏರಿಕೆ ಮಾಡಿ, ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಲಾಗಿದೆ. ಮೂಲಗಳಿಂದ ಲಭ್ಯವಿರುವ ಪಟ್ಟಿ ಗಮನಿಸಿದರೆ, ಬಿಜೆಪಿ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲೇ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ (8 ರಿಂದ 13ಕ್ಕೆ ಏರಿಕೆ), ಬೊಮ್ಮನಹಳ್ಳಿ(7–14), ಕೆ.ಆರ್.ಪುರ(9–13), ಮಹದೇವಪುರ(8–12), ರಾಜರಾಜೇಶ್ವರಿನಗರ(9–13), ಯಶವಂತಪುರ(5–8) ಕ್ಷೇತ್ರಗಳಲ್ಲೇ ವಾರ್ಡ್‌ಗಳ ಸಂಖ್ಯೆ ಏರಿಕೆಯಾಗಿವೆ. ಜೆಡಿಎಸ್‌ ಪ್ರತಿನಿಧಿಸುವ ದಾಸರಹಳ್ಳಿ(8–13), ಕಾಂಗ್ರೆಸ್ ಪ್ರತಿನಿಧಿಸುವ ಬ್ಯಾಟರಾಯನಪುರ(7–11) ಕ್ಷೇತ್ರಗಳಲ್ಲೂ ವಾರ್ಡ್‌ಗಳ ಸಂಖ್ಯೆ ಏರಿಕೆಯಾಗಿದೆ.

ADVERTISEMENT

ಹತ್ತು ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಶಿವಾಜಿನಗರದಲ್ಲಿ ಈ ಹಿಂದೆ 7 ವಾರ್ಡ್‌ಗಳಿದ್ದವು. ಈಗ 6 ವಾರ್ಡ್‌ಗಳಿಗೆ ಇಳಿಸಲಾಗಿದೆ. ಇದೊಂದೇ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಇಳಿಕೆಯಾಗಿದೆ.

‘ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್‌ ಮರು ವಿಂಗಡಣಾ ಸಮಿತಿ ಇದೆ. ಆದರೆ, ಬಿಜೆಪಿಯ ಶಾಸಕರು, ಸಂಸದರು ಮತ್ತು ಆರ್‌ಎಸ್‌ಎಸ್‌ ಕಚೇರಿ ಕೇಶವಕೃಪಾದಲ್ಲಿ ಈ ಕರಡು ತಯಾರಾಗಿದೆ. ಅದನ್ನು ಬಿಬಿಎಂಪಿ ಅಧಿಕಾರಿಗಳು ಈಗ ಸರ್ಕಾರಕ್ಕೆ ಸಲ್ಲಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದರು.

‘ಅವೈಜ್ಞಾನಿಕವಾಗಿ ವಾರ್ಡ್‌ ಮರುವಿಂಗಡಣೆ ಮಾಡಲಾಗಿದೆ. ಈ ಬಗ್ಗೆ ಮೊದಲಿಂದಲೂ ನಾನು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇನೆ. ಆದರೂ ಬಿಜೆಪಿಯವರು ತಮಗೆ ಬೇಕಾದಂತೆ ವಿಂಗಡಣೆ ಮಾಡಿಕೊಂಡಿದ್ದಾರೆ. ಕರಡು ಪ್ರಕಟವಾದ ಬಳಿಕ ಆಕ್ಷೇಪಣೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

2011ರ ಜನಗಣತಿಯಲ್ಲಿನ ಜನಸಂಖ್ಯೆ ಆಧರಿಸಿ ವಾರ್ಡ್‌ಗಳನ್ನು ವಿಂಗಡಿಸಲಾಗಿದೆ. ಹೊರ ವಲಯದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಾರ್ಡ್‌ಗಳ ಸಂಖ್ಯೆ ಸ್ವಾಭಾವಿಕವಾಗಿ ಏರಿಕೆಯಾಗಿದೆ ಎಂಬುದು ಬಿಬಿಎಂಪಿ ಅಧಿಕಾರಿಗಳ ಸ್ಪಷ್ಟನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.