ನಿಪ್ಪಾಣಿ: ಮಹಿಳೆ ಮನೆಗೆಲಸಕ್ಕೆ ಮಾತ್ರ ಸೀಮಿತವಾಗದೆ ‘ಹೆಣ್ಣು ಕಲಿತರೆ ಇಡೀ ಕುಟುಂಬವೇ ಕಲಿತಂತೆ’ ಎಂಬ ನಾಣ್ನುಡಿಗೆ ಅನುಗುಣವಾಗಿ ಆಕೆ ಇಂದು ಸ್ವಸಾಮರ್ಥ್ಯದಿಂದ ಏನನ್ನಾದರೂ ಸಾಧಿಸುತ್ತ ಎಲ್ಲ ಕ್ಷೇತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಸಮಾಜಕ್ಕೆ ಸ್ಫೂರ್ತಿಯಾದ ಹಲವಾರು ಉದಾಹರಣೆಗಳಿವೆ.
ಗಡಿಭಾಗ ಪ್ರದೇಶದಲ್ಲಿ ಸಮಾಜದ ಬಗ್ಗೆ ಕಳಕಳಿವುಳ್ಳ ಇಲ್ಲಿನ ಮಹಿಳೆಯೊಬ್ಬರು ತಮ್ಮ ಇಬ್ಬರು ಪುತ್ರಿಯರೊಂದಿಗೆ ಅಂಗವಿಕಲ ಮಕ್ಕಳ ಜೀವನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಹುಡ್ಕೋ ಕಾಲೊನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಗೀತಾ ಸುರೇಶ ಕದಂ ತಮ್ಮ ಪುತ್ರಿಯರಾದ ಪಂಕಜಾ (ಮುಖ್ಯಗುರುಮಾತೆ) ಮತ್ತು ಮನಿಷಾ (ಮೇಲ್ವಿಚಾರಕಿ) ಜೊತೆಗೂಡಿ ಸಂಭಾಜಿನಗರದಲ್ಲಿ ಕಿವುಡ ಮತ್ತು ಮೂಗ ಮಕ್ಕಳ ಶುಶ್ರೂಷೆ ನಡೆಸಿ ಆ ಅಂಗವಿಕಲ ಮಕ್ಕಳ ಜೀವನಕ್ಕೆ ದಾರಿದೀಪವಾಗಲು ಪ್ರಯತ್ನಿಸುತ್ತಿರುವುದು ಗಮನಾರ್ಹವಾಗಿದೆ.
ವಿಕಲಾಂಗತೆಯನ್ನು ಮರೆತು ಉತ್ತಮ ಸಾಧನೆ ಮಾಡುವ ಮೂಲಕ ಹೆಸರಾಗಬೇಕೆಂಬ ಇಚ್ಛೆಯೊಂದಿಗೆ 2004ರಲ್ಲಿ ‘ಮಾವುಲಿ ಗ್ರಾಮೀಣ ಅಭಿವೃದ್ಧಿ ಅಂಗವಿಕಲರ ಪುನರ್ವಸತಿ ಕೇಂದ್ರ’ ಎಂಬ ಸಂಘ ಸ್ಥಾಪಿಸಿ 2006ರಲ್ಲಿ ‘ನಿತೀನಕುಮಾರ ಕದಮ ಕಿವುಡ ಮಕ್ಕಳ ವಸತಿಯುತ ವಿಶೇಷ ಶಾಲೆ’ಯನ್ನು ಆರಂಭಿಸಿದರು. ಒಂದರಿಂದ ಆರನೇ ತರಗತಿಯವರೆಗೆ ಒಟ್ಟು 56 ವಿಕಲಾಂಗ ಬಡ ಮಕ್ಕಳು ಉಚಿತವಾಗಿ ಸಂತೋಷದಿಂದ ಕಲಿಯುತ್ತಿದ್ದಾರೆ.
ಪ್ರೇರಣೆ: ಈ ಕಾರ್ಯಕ್ಕೆ ಅವರ ಏಕೈಕ ಪುತ್ರ ದಿ. ನಿತಿನ್ ಕುಮಾರ ಅವರಿಗೆ ಪ್ರೇರಣೆ. ಚಿಕ್ಕಂದಿನಿಂದಲೇ ಮಗುವಿನ ಮಾತನಾಡುವ ನಡೆದಾಡುವ ಶಕ್ತಿ ಕುಂಠಿತಗೊಂಡು ಮಲಗಿಕೊಂಡೇ ಇತ್ತು. 2011ರಲ್ಲಿ 38ನೇ ವಯಸ್ಸಿನಲ್ಲಿ ಮೃತನಾದ. ಇಂತಹ ಅನೇಕ ಮಕ್ಕಳು ಸಮಾಜದಲ್ಲಿದ್ದನ್ನು ನೋಡಿದ ಗೀತಾರವರು ಇಂತಹ ಮಕ್ಕಳ ಭವಿಷ್ಯದ ಬದಲಾವಣೆಗೋಸ್ಕರ ಸಂಸ್ಥೆ ಪ್ರಾರಂಭಿಸಿದರು.
‘ಮೊದಲೇ ಮಗನ ಆಸ್ಪತ್ರೆ ಖರ್ಚಿಗೆ ಬಹಳಷ್ಟು ಹಣ ತಗುಲಿತ್ತು. ಶಾಲೆ ಆರಂಭಿಸಲು ಮನೆ, ಜಮೀನು ಮಾರಾಟ ಮಾಡಿದೆ’ ಎನ್ನುತ್ತಾರೆ ಅಧ್ಯಕ್ಷೆ ಗೀತಾ ಕದಮ್.
ಆರಂಭದಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗುತ್ತಿರಲಿಲ್ಲ. ಅವರ ಮನವೊಲಿಸಿ ಆರಂಭದಲ್ಲಿ 8 ಮಕ್ಕಳಿಂದ ಶಾಲೆ ಆರಂಭವಾಯಿತು. ‘ಒಂದು ತೊಲೆ ಬಂಗಾರ ಇಲ್ಲ ಮೈಮೇಲೆ, ಹೇಗೆ ನಡೆಸುವೆ ಎನ್ನುತ್ತ ಕೆಲವರು ಟೀಕಿಸಿದ್ದು ಮನಸ್ಸಿಗೆ ನೋವನ್ನುಂಟು ಮಾಡಿತ್ತು. ಆದರೆ ನನ್ನ ಮೈಮೇಲೆ ಬಂಗಾರವಿಲ್ಲದಿದ್ದರೂ ನನ್ನ ಹತ್ತಿರ 56 ಬಂಗಾರದ ಹೂವುಗಳಿವೆ(ಮಕ್ಕಳೇ ಬಂಗಾರ)’ ಎನ್ನುತ್ತಾರೆ ಕದಮ.
‘ಸಾಮಾನ್ಯ ಮಕ್ಕಳಂತೆ ಓದುತ್ತಿರುವ ವಿಕಲಾಂಗ ಮಕ್ಕಳು ತಾವು ಯಾರಿಗೂ ಕಡಿಮೆಯಿಲ್ಲ ಎಂಬಂತೆ ಸಾಧನೆಯನ್ನು ಮೆರೆದಿದ್ದಾರೆ. ರಾಜ್ಯ ಮತ್ತು ಹೊರರಾಜ್ಯದಲ್ಲಿ ಪ್ರಶಂಸನಾರ್ಹವಾದ ಸಾಧನೆಯನ್ನು ಮಾಡಿದ್ದು ನನಗೆ ಸಾರ್ಥಕವೆನಿಸುತ್ತದೆ’ ಎನ್ನುತ್ತಾರೆ ಪಂಕಜಾ.
‘ಪಾಲಕರು ತಮ್ಮ ಅಂಗವಿಕಲ ಅದರಲ್ಲೂ ವಿಶೇಷವಾಗಿ ವಿಕಲಾಂಗ ಮಕ್ಕಳನ್ನು ಮನೆಯಲ್ಲಿಡದೇ ವಿಶೇಷ ಅಗತ್ಯತೆವುಳ್ಳ ಶಾಲೆಯಲ್ಲಿ ದಾಖಲು ಮಾಡಿದಲ್ಲಿ ಅಂತಹ ಮಕ್ಕಳು ಹಂತ ಹಂತವಾಗಿ ಪ್ರಗತಿ ಹೊಂದುತ್ತಾರೆ’ ಎಂಬುದು ಅವರ ಆಶಯ.
ಸರಕಾರ, ಜನಪ್ರತಿನಿಧಿಗಳು ಅಥವಾ ಸಂಘಸಂಸ್ಥೆಗಳು ಜಾಗ ಹಾಗೂ ಸುಸಜ್ಜಿತ ಕಟ್ಟಡ ಕಲ್ಪಿಸಿದಲ್ಲಿ ಈ ಮಕ್ಕಳ ಪೋಷಣೆಗೆ ಸಹಾಯವಾಗುವುದು ಹಾಗೂ ಶನಿವಾರ ನಡೆಯುವ ವಿಶ್ವ ಮಹಿಳಾ ದಿನಾಚರಣೆಗೆ ಮೆರುಗು ಬರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.