ADVERTISEMENT

ಅಂತರ್ಜಲ ಕುಸಿತ: ಕುಡಿಯುವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 8:15 IST
Last Updated 22 ಜೂನ್ 2012, 8:15 IST

ರಾಯಬಾಗ: ಕುಡಿಯುವ ನೀರಿನ ಮೂಲವಾಗಿದ್ದ ಹುಲ್ಯಾಳ ಕೆರೆ ಬತ್ತಿ ಹೋದ ಕಾರಣ ಪಟ್ಟಣದಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯಾಗಿ ಕೊಳವೆ ಬಾವಿಗಳ ಮೂಲಕ ಪ್ರತಿ ವಾರ್ಡಿನಲ್ಲಿ ಎರಡು ಮೂರರಂತೆ ಜಲ ಕುಂಭಗಳನ್ನು ಪಟ್ಟಣ ಪಂಚಾಯಿತಿಯವರು ವ್ಯವಸ್ಥೆ ಮಾಡಿದ್ದಾರೆ. 

 ಆದರೆ ಕೊಳವೆ ಬಾವಿಗಳ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು ಅವುಗಳಲ್ಲಿ ನೀರು ಬರದಂತಾಗಿದೆ. ಹೀಗಾಗಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ.

ಈ ನಿಟ್ಟಿನಲ್ಲಿ ವಿವೇಕರಾವ್ ಪಾಟೀಲರ ನೇತೃತ್ವದಲ್ಲಿ ಮುಂಜಾಗ್ರತೆಯಾಗಿ ನೀರಿನ ಸಂಗ್ರಹ ಪರೀಕ್ಷಿಸಿ ಪಟ್ಟಣದಲ್ಲಿ 17ನೂತನ ಕೊಳವೆ ಬಾವಿಗಳನ್ನು ಕೊರೆಯಲು ನಿರ್ಧರಿಸಲಾಗಿದೆ. ಇವುಗಳಲ್ಲಿ ಈಗಾಗಲೇ 3-4 ಕಡೆಗೆ ಕೊರೆಸಿದ್ದು ಅಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು  ಬಂದಿವೆ. ಈ ಕೊಳವೆ ಬಾವಿಗಳ ಮೂಲಕ ನಾಗರಿಕರಿಗೆ ಟ್ಯಾಂಕರ್‌ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಟ್ಯಾಂಕರ್‌ಗಳ ನೀರನ್ನು ವಿತರಿಸುವಾಗ ನೀರಿನ ರಾಜಕೀಯ ಮಾಡುತ್ತಿದ್ದಾರೆ. ಅವಶ್ಯಕತೆ ಇದ್ದಲ್ಲಿ ಸರಿಯಾಗಿ ನೀರನ್ನೇ ಹಾಕುವುದಿಲ್ಲ. ಪ್ರಭಾವಿಗಳ ಮನೆ ಮನೆಗೆ ಹೋಗಿ ಅಂತವರ ಟ್ಯಾಂಕರ್‌ಗಳಿಗೆ ನೀರನ್ನು ತುಂಬಿಸಿ ಬರುತ್ತಿದ್ದಾರೆಂದು ಸಾರ್ವಜನಿಕರು ಅಪಾದಿಸಿದ್ದಾರೆ.

ಇನ್ನು ಕೆಲವರು ಟ್ಯಾಂಕರ್‌ಗಳ ಬೆನ್ನತ್ತಿ ತಮಗೆ ಬೇಕಾದವರ ಮನೆಗಳಿಗೆ ನೀರನ್ನು ತುಂಬಿಸಿ ಬರುತ್ತಿದ್ದಾರೆ. ಮೂರನೆಯ ವಾರ್ಡಿನಲ್ಲಿ ನೀರನ್ನೇ ಕೊಡುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳ ಪರವಾಗಿ ಶಂಕರ ಲಠ್ಠೆ ದೂರಿದ್ದಾರೆ.

ಶೀಘ್ರವೇ ಕುಡಿಯುವ ನೀರಿಗೆ ಕ್ರಮ: ಇದೇ ರೀತಿ ಮಳೆಯಾಗದೆ ಹೋದರೆ ಪರಿಸ್ಥಿತಿ ಗಂಭಿರವಾಗಲಿದೆ ಎಂದು ತಿಳಿಸಿರುವ ಶಾಸಕ ದುರ್ಯೋಧನ ಐಹೊಳೆ ಪಟ್ಟಣ ಪ್ರದೇಶದ ಜನತೆಗಾಗಿ ಕುಡಿಯುವ ನೀರಿಗಾಗಿ ಸರ್ಕಾರದಿಂದ ವಿಶೇಷ ಅನುದಾನ ಮಂಜೂರ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ.

ಅವಶ್ಯಕತೆಗೆ ಅನುಗುಣವಾಗಿ ಕೊಳವೆ ಬಾವಿ ಕೊರೆಯುವುದು, ಇದ್ದಕೊಳವೆ ಬಾವಿಗಳನ್ನು ಆಳ ಮಾಡಿಸುವುದು. ಕೊಳವೆ ಬಾವಿಗಳಿಂದ ಪೈಪ್‌ಲೈನ್ ಮಾಡಿಸಿ ಕುಡಿಯುವ ನೀರಿನ ಸರಬರಾಜಿಗೆ ಶುಕ್ರವಾರ ಪಟ್ಟಣದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುವುದು ಎಂದ ಶಾಸಕರು ತಿಳಿಸಿದ್ದಾರೆ.

ಚಿಂಚಲಿ ರಸ್ತೆಯ ಜನತೆಗಾಗಿ ಒಂದು ಕೊಳವೆ ಬಾವಿ ಕೊರೆಸಿ ನೀರು ಸರಬರಾಜು ಮಾಡುವಂತೆ ಅಲ್ಲಿನ ನಾಗರಿಕರು ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.