ADVERTISEMENT

ಅಥಣಿ ಬರ ಪ್ರದೇಶ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 10:45 IST
Last Updated 26 ಸೆಪ್ಟೆಂಬರ್ 2011, 10:45 IST

ಅಥಣಿ: ಮುಂಗಾರು ಮಳೆಯ ಜೊತೆಗೆ ಹಿಂಗಾರು ಮಳೆಯೂ ಬಾರದೆ ತಾಲ್ಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಬರಪೀಡಿತ ಪ್ರದೇಶವೆಂದು ಘೋಷಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಶಹಜಹಾನ್ ಡೋಂಗರಗಾಂವ ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಕೆರೆ, ಹಳ್ಳಗಳಲ್ಲಿ ನೀರಿನ ಸಂಗ್ರಹವಾಗಿಲ್ಲ. ಕುಡಿಯುವ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಯನ್ನು ನಿವಾರಿಸಲು ತಕ್ಷಣವೇ ಕೊಳವೆ ಬಾವಿ ತೋಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿ, ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ತೋಟಗಾರಿಕಾ ಬೆಳೆಗಳ ರಕ್ಷಣೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವದು ಸೇರಿದಂತೆ ವಿವಿಧ ಮುಂಜಾಗೃತ ಕ್ರಮ ಕೈಗೊಂಡು ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೀಗ ಮಳೆಗಾಲ ಮುಗಿಯುವ ಹಂತದಲ್ಲಿದೆ. ತಾಲ್ಲೂಕಿಗೆ ಆಸರೆಯಾಗಿರುವ ಕರಿಮಸೂತಿ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದರೆ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ಪರಿಹಾರ ಕೈಗೊಳ್ಳಬಹುದಿತ್ತು. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಯೋಜನೆಯ ವಿಶ್ವಾಸವೂ ಕಮರಿ ಹೋಗಿದೆ ಎಂದು ವಿಷಾದಿಸಿದ್ದಾರೆ.


ನೆಮ್ಮದಿ ಕೆಡಿಸಿದ ಕೇಂದ್ರಗಳು: ಬದಲಾದ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಪ್ರತಿನಿತ್ಯ ತಾಲ್ಲೂಕು ಕೇಂದ್ರಕ್ಕೆ ಎಡತಾಕಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ ಆಯಾ ಪಂಚಾಯಿತಿವಾರು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ವಿತರಿಸುವ ವ್ಯವಸ್ಥೆ ಆರಂಭಿಸಬೇಕೆಂದು ಡೋಂಗರಗಾಂವ ಆಗ್ರಹಿಸಿದ್ದಾರೆ.

ಈಗ ಚಾಲ್ತಿಯಲ್ಲಿರುವ ನೆಮ್ಮದಿ ಕೇಂದ್ರಗಳಿಗೆ ನಿರಂತರ ವಿದ್ಯುತ್ ಪೂರೈಸುವುದು ಹಾಗೂ ಯಂತ್ರೋಪಕರಣಗಳು ಸ್ಥಗಿತಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವಂತೆಯೂ ಅವರು ಆಗ್ರಹಿಸಿದರು.

ಆಹಾರ ಕೊರತೆ: ಆತಂಕ
ಆರ್ಥಿಕವಾಗಿ ಬಲಿಷ್ಠವೆಂದು ಗುರುತಿಸಿಕೊಂಡಿರುವ ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಸಾವನ್ನಪ್ಪುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಇಲ್ಲಿಯ ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್. ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗೋದಾಮುಗಳಲ್ಲಿ ಆಹಾರ ಧಾನ್ಯ ಕೊಳೆಯುತ್ತಿದ್ದರೂ ಸಮರ್ಪಕ ವಿಲೇವಾರಿ ಮಾಡದೇ ಇರುವದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಬಳ್ಳಾರಿ, ಗುಲಬರ್ಗಾ ಮತ್ತಿತರ ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಸಾಯುವಂತಾಗಿದೆ ಎಂದರು.

ಮಕ್ಕಳ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂಸ್ಥೆಯ ವತಿಯಿಂದ ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT