ADVERTISEMENT

`ಅನ್ಯಾಯದ ವಿರುದ್ಧ ಪ್ರತಿಭಟಿಸಿ'

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2013, 6:50 IST
Last Updated 5 ಫೆಬ್ರುವರಿ 2013, 6:50 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 7ನೇ ವಾರ್ಷಿಕೋತ್ಸವ ಹಾಗೂ `ಸಿರಿಗನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ'ದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಮಾತನಾಡಿದರು. ಸಿದ್ಧನಗೌಡ ಪಾಟೀಲ, ಶಶಿಕಾಂತ ನಾಯಿಕ, ಸಿದ್ಧರಾಮ ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಎಸ್. ಶಿವರಾಂ ಚಿತ್ರದಲ್ಲಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ನಡೆದ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 7ನೇ ವಾರ್ಷಿಕೋತ್ಸವ ಹಾಗೂ `ಸಿರಿಗನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ'ದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಮಾತನಾಡಿದರು. ಸಿದ್ಧನಗೌಡ ಪಾಟೀಲ, ಶಶಿಕಾಂತ ನಾಯಿಕ, ಸಿದ್ಧರಾಮ ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಎಸ್. ಶಿವರಾಂ ಚಿತ್ರದಲ್ಲಿದ್ದಾರೆ.   

ಬೆಳಗಾವಿ: `ಜನರು ಮೂಕ ಹಾಗೂ ಸರ್ಕಾರ ಕಿವುಡಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೇ ಧಕ್ಕೆ ಬರುತ್ತದೆ. ಹೀಗಾಗಿ ಅನ್ಯಾಯದ ವಿರುದ್ಧ ಜನರು ಯಾವುದೇ ಅಳುಕಿಲ್ಲದೇ ಧ್ವನಿ ಎತ್ತಿ ಪ್ರತಿಭಟಿಸಬೇಕು' ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಕರೆ ನೀಡಿದರು.

ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 7ನೇ ವಾರ್ಷಿಕೋತ್ಸವದ ಅಂಗವಾಗಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಸಿರಿಗನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ'ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

`ಜನರು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದೇ ರೀತಿ ಜನರ ಭಾವನೆಗಳಿಗೆ ಸರ್ಕಾರವು ಸ್ಪಂದಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ' ಎಂದರು. `ಇಂದು ಭ್ರಷ್ಟಾಚಾರ, ವಿವಿಧ ಹಗರಣ ಹಾಗೂ ಅಪರಾಧಗಳು ಹೆಚ್ಚುತ್ತಿವೆ. ಇದರ ನಡುವೆಯೇ ಬದ್ಧತೆಯಿಂದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲ ತೊಡಗಿಕೊಳ್ಳಬೇಕು. ಅಧಿಕಾರದಲ್ಲಿದ್ದವರು ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿದಾಗ ಭ್ರಷ್ಟಾಚಾರ ಕಡಿಮೆಯಾಗುತ್ತದೆ' ಎಂದರು.

`ರಾಜ್ಯೋತ್ಸವದಂತಹ ಪ್ರಶಸ್ತಿ ಪಡೆಯಲು ಲಾಬಿ ನಡೆಯುತ್ತಿರುವುದು ದುರ್ದೈವದ ಸಂಗತಿ. ನಿಜವಾಗಿಯೂ ಸಾಧನೆಗೈದವರಿಗೇ ಪ್ರಶಸ್ತಿ ಲಭಿಸಬೇಕು. ಪ್ರಶಸ್ತಿಗಳೇ ಸಾಧಕರನ್ನು ಹುಡುಕಿಕೊಂಡು ಹೋಗಬೇಕು' ಎಂದು ನ್ಯಾ. ಪಾಟೀಲ ಹೇಳಿದರು.

ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಶಶಿಕಾಂತ ನಾಯಿಕ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ ಹಾಜರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ವಿಜಯಲಕ್ಷ್ಮೀ, ಜಿ.ಎಸ್. ಸೋನಾರ ನಿರೂಪಿಸಿದರು.

ಹಿರಿಯ ಸಿನಿಮಾ ನಟ ಎಸ್. ಶಿವರಾಂ ಅವರಿಗೆ ಸಿರಿಗನ್ನಡ `ರಾಷ್ಟ್ರೀಯ ರತ್ನ ಪ್ರಶಸ್ತಿ', ಯುವ ಸಾಹಿತಿ ಗವಿಸಿದ್ಧ ಬಿ. ಹೊಸಮನಿ ಅವರಿಗೆ `ಮ.ಗು. ಘಿವಾರಿ ಸಾಹಿತ್ಯ ಪ್ರಶಸ್ತಿ' ಹಾಗೂ ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ (ಆಧುನಿಕ ವಚನ ಸಾಹಿತ್ಯ), ಎಂ.ಎ. ಸನದಿ (ಮಕ್ಕಳ ಸಾಹಿತ್ಯ), ದೀಪಿಕಾ ಚಾಟೆ (ಅನುವಾದ), ಪುಂಡಲೀಕ ಪಾಟೀಲ (ಶಿಕ್ಷಣ ಹಾಗೂ ಸಾಹಿತ್ಯ) ಅವರಿಗೆ `ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ `ಸಿರಿಗನ್ನಡ ವರ್ಷದ ವ್ಯಕ್ತಿ ಪುರಸ್ಕಾರ'ವನ್ನೂ ಇದೇ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು.

ನಟ ಶಿವರಾಂ ಕಳವಳ: ಇದಕ್ಕೂ ಮೊದಲು ಸಮಾವೇಶವನ್ನು ಉದ್ಘಾಟಿಸಿದ ಹಿರಿಯ ನಟ ಎಸ್. ಶಿವರಾಂ, `ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಕನ್ನಡ ಚಿತ್ರರಂಗವು ದುಸ್ಥಿತಿಯನ್ನು ತಲುಪಿದೆ. ಪರಭಾಷೆ ಚಿತ್ರಗಳ ಡಬ್ಬಿಂಗ್, ಕಲಾವಿದರ ಹಾವಳಿ ಹೆಚ್ಚುತ್ತಿವೆ. ಪರಭಾಷಾ ಕಲಾವಿದರಿಗೆ ಕನ್ನಡಿಗರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ, ಅನ್ಯಭಾಷೆಯ ಸಿನಿಮಾದಲ್ಲಿ ಕನ್ನಡಿಗರಿಗೆ ಅವಕಾಶ ಲಭಿಸುತ್ತಿಲ್ಲ. ಅಲ್ಲದೇ ಕನ್ನಡದಲ್ಲೇ ಕನ್ನಡಿಗ ಕಲಾವಿದರಿಗೆ ಅವಕಾಶ ದೊರೆಯುತ್ತಿಲ್ಲ' ಎಂದು ವಿಷಾದಿಸಿದರು.

ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಕಾಲಘಟ್ಟದಿಂದ ಇಂದಿನವರೆಗೂ ನಡೆದು ಬಂದ ಹಾದಿಯತ್ತ ಅವರು ಮೆಲುಕು ಹಾಕಿದರು.
ಡಾ. ಪ್ರದೀಪಕುಮಾರ ಹೆಬ್ರಿ ಅವರು ರಚಿಸಿದ `ಯುಗಾವತಾರಿ' ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕಾರಂಜಿಮಠದ ಗುರು ಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.