ADVERTISEMENT

ಆಚಾರ್ಯರು ಎಲ್ಲರಿಗೂ ಆದರ್ಶರು: ಅಂಗಡಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:05 IST
Last Updated 16 ಫೆಬ್ರುವರಿ 2012, 6:05 IST

ಬೆಳಗಾವಿ: “ಉನ್ನತ ಶಿಕ್ಷಣ ಸಚಿವರಾಗಿದ್ದ ವಿ.ಎಸ್. ಆಚಾರ್ಯರು ಪ್ರಾಮಾಣಿಕತೆ, ಸಜ್ಜನಿಕೆಯ ಮೂಲಕ ಅಪರೂಪದ ರಾಜಕಾರಣಿಯಾಗಿದ್ದರು. ಅವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದರು” ಎಂದು ಸಂಸದ ಸುರೇಶ ಅಂಗಡಿ ಅಭಿಪ್ರಾಯಪಟ್ಟರು.

ಭಾರತೀಯ ಜನತಾ ಪಕ್ಷದ ಮಹಾನಗರ ಮತ್ತು ಗ್ರಾಮೀಣ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

“ಸರ್ಕಾರದಲ್ಲಿ ಅನೇಕ ಮಹತ್ವದ ಸ್ಥಾನದಲ್ಲಿದ್ದರೂ ಸಹ ಆಚಾರ್ಯರು ಜನಸಾಮಾನ್ಯರ, ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪಕ್ಷಕ್ಕೆ ಹಾಗೂ ನನಗೆ ಗುರುವಿನ ಸ್ಥಾನದಲ್ಲಿದ್ದು, ಮಾರ್ಗದರ್ಶನ ನೀಡುತ್ತಿದ್ದರು” ಎಂದರು.

ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, “ಆಚಾರ್ಯರು ಸಚ್ಚಾರಿತ್ರ್ಯದಿಂದ ಜೀವನ ನಡೆಸಿದರು. ಇವರ ಆದರ್ಶಗಳನ್ನು ಪಕ್ಷದ ಕಾರ್ಯಕರ್ತರು ಅಳವಡಿಸಿಕೊಳ್ಳುವ ಮೂಲಕ ಆಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು” ಎಂದು ಹೇಳಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಝಿರಲಿ, “ದಕ್ಷ ಆಡಳಿತ ಶೈಲಿಯಿಂದಾಗಿ ವಿರೋಧ ಪಕ್ಷದವರೂ ಆಚಾರ್ಯರನ್ನು ಅಭಿಮಾನದಿಂದ ನೋಡುತ್ತಿದ್ದರು” ಎಂದರು.

ವಿ.ಎಸ್. ಆಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗ್ರಾಮೀಣ ಶಾಸಕ ಸಂಜಯ ಪಾಟೀಲ, ಬುಡಾ ಅಧ್ಯಕ್ಷ ಬಾಳಾಸಾಹೇಬ ಕಂಗ್ರಾಳಕರ, ಪರಮಾನಂದ ಗೋದ್ವಾನಿ, ಆರ್.ಎಸ್. ಮುತಾಲಿಕ, ಮಾಜಿ ಶಾಸಕ ಮನೋಹರ ಕಡೋಲ್ಕರ, ರಾಜೇಂದ್ರ ಪವಾರ, ಶಾರದಾ ಚರಣ ಕುಲಕರ್ಣಿ, ಮಲ್ಲೇಶ ಚೌಗಲೆ, ದೀಪಕ ಜಮಖಂಡಿ, ಶಾಂತಾ ಉಪ್ಪಾರ, ನಂದು ಮಿರಜಕರ ಮತ್ತಿತರರು ಹಾಜರಿದ್ದರು. ಉಜ್ವಲಾ ಬಡವನಾಚೆ ಪ್ರಾರ್ಥಿಸಿದರು. ಸಂಜೀವ ಹನಮಸಾಗರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.