ADVERTISEMENT

ಆದೇಶ ವಾಪಸ್‌ ಪಡೆಯದಿದ್ದರೆ ಹೋರಾಟ

ಎಪಿಎಂಸಿ ಕಾಯ್ದೆಯಿಂದ ಹಣ್ಣು, ತರಕಾರಿ ಹೊರಗೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 8:48 IST
Last Updated 3 ಜನವರಿ 2014, 8:48 IST

ಬೆಳಗಾವಿ: ‘ಹಣ್ಣು ಮತ್ತು ತರಕಾರಿ­ಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಯಿಂದ ತೆಗೆದು ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯದಿದ್ದರೆ ರಾಜ್ಯದಾದ್ಯಂತ ರೈತರು ಬೀದಿಗೆ ಇಳಿದು ಉಗ್ರ ಹೋರಾಟ ನಡೆಸಲಿದ್ದಾರೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಸಿದರು.

‘ರೈತರಿಗೆ ತಮ್ಮ ಉತ್ಪನ್ನಗಳನ್ನು ಎಲ್ಲಿ ಮಾರಬೇಕೆನ್ನುವ ಬಗ್ಗೆ ಆಯ್ಕೆ ನೀಡಲು ಹಾಗೂ ಗ್ರಾಹಕರಿಗೆ ಕಡಿಮೆ ದರದ ಲಾಭ ದೊರಕಿಸಲು ಹಣ್ಣು ಹಾಗೂ ತರಕಾರಿಯನ್ನು ಎಪಿಎಂಸಿ ಕಾಯ್ದೆ­ಯಿಂದ ತೆಗೆದು ಹಾಕುವ ಅವಶ್ಯಕತೆ ಇದ್ದು, ಜನವರಿ 15ರೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ­ಮಂತ್ರಿಗಳು ಡಿಸೆಂಬರ್‌ 30ರಂದು ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಇದರ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ­ಕೊಡಲಾಗಿದೆ. ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಆಲುಗಡ್ಡೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಮಾವು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಉತ್ಪನ್ನಗಳನ್ನು ಬೆಳೆಯುವ ರೈತರು ಬೀದಿಗೆ ಬೀಳಲಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಈ ಆದೇಶವನ್ನು ವಾಪಸ್‌ ಪಡೆದು ರೈತರಿಗೆ ಅನುಕೂಲ ಆಗುವಂತೆ ಎಪಿಎಂಸಿ ಕಾಯ್ದೆಯನ್ನು ಸಬಲಗೊಳಿಸಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

‘ಹಳೆಯ ಕಾಯ್ದೆಯಿಂದಾಗಿ ರೈತರು ಉಚಿತವಾಗಿ ಎಪಿಎಂಸಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶ ಇತ್ತು. ಇಲಾಖೆಯಿಂದಲೇ ತೂಕ ಮಾಡಿಸಲಾಗುತ್ತಿತ್ತು. ಆದರೆ, ಹೊಸ ಆದೇಶದಿಂದಾಗಿ ರೈತರು ಬೀದಿ ಮೇಲೆ ಕುಳಿತು ಉತ್ಪನ್ನ ಮಾರಬೇಕಾದ ಸ್ಥಿತಿ ಬರಲಿದೆ. ಈ ಉತ್ಪನ್ನಗಳ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ, ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಿ ಅಗತ್ಯ ನೀತಿಯನ್ನು ಸರ್ಕಾರ ರೂಪಿಸಿದ ಬಳಿಕ ಈ ಆದೇಶವನ್ನು ಹೊರಡಿ­ಸಬೇಕಿತ್ತು.

ಇಂಥ ಯಾವುದೇ ಪೂರ್ವ ಸಿದ್ಧತೆಯನ್ನು ಸರ್ಕಾರ ಮಾಡಿ­ಕೊಂಡಿಲ್ಲ. ಹಾಗೆಯೇ ರೈತರನ್ನು ಬೀದಿಗೆ ತಳ್ಳಿದರೆ, ರಾಜ್ಯ ಸರ್ಕಾರದ ಮಾನವನ್ನೂ ಬೀದಿ ಬೀದಿಯಲ್ಲಿ ನಾವು ಹರಾಜು ಹಾಕುತ್ತೇವೆ’ ಎಂದು ಕೋಡಿಹಳ್ಳಿ ಎಚ್ಚರಿಕೆ ನೀಡಿದರು. ‘ರಾಜ್ಯ ಸರ್ಕಾರ ನಿಗದಿಪಡಿಸಿದಂತೆ ರೈತರ ಪ್ರತಿ ಟನ್‌ ಕಬ್ಬಿಗೆ ₨ 2,650 ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಂಕ್ರಾಂತಿವರೆಗೆ ಗಡುವು ನೀಡುತ್ತೇವೆ. ಇಲ್ಲದಿದ್ದರೆ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ನಡೆಸುತ್ತೇವೆ’ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.