ADVERTISEMENT

ಆರೋಗ್ಯ ಜಾಗೃತಿಯಿಂದ ಶಿಶು ಸಾವು ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 10:40 IST
Last Updated 26 ಸೆಪ್ಟೆಂಬರ್ 2011, 10:40 IST

ಹುಕ್ಕೇರಿ: ತಾಯಂದಿರ ಮತ್ತು ನವಜಾತ ಶಿಶುಗಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಗ್ರಾಮೀಣ ಜನರಲ್ಲಿ ಆರೋಗ್ಯದ ಅರಿವು ಮುಖ್ಯ. ಸಮುದಾಯದೊಂದಿಗೆ ಸಂವಾದದ ಮೂಲಕ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೆಳಗಾವಿ ಜೆ.ಎನ್.ಎಂ.ಸಿ. ಮಹಿಳೆ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದ ಮುಖ್ಯ ಸಂಶೋಧಕ ಡಾ. ಶಿವಪ್ರಸಾದ ಗೌಡರ ಹೇಳಿದರು.

ಅವರು ಬೆಳಗಾವಿ ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜು ಮತ್ತು ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದ “ಮಮತೆ” ಕಾರ್ಯಕ್ರಮದಡಿ ತಾಲ್ಲೂಕಿನ ಹುಲ್ಲೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ `ಸಮುದಾಯದೊಂದಿಗೆ ಸಂವಾದ~ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆರಿಗೆ ಸಮಯದಲ್ಲಿ ಗರ್ಭಿಣಿ ಅಥವಾ ನವಜಾತ ಶಿಶುಗಳ ಮರಣಕ್ಕೆ ಸರಿಯಾದ ತಿಳುವಳಿಕೆ ಇರದಿರುವುದೇ ಕಾರಣ. ಅನಪೇಕ್ಷಿತ ಮರಣ ಸಂಭವಿಸುವುದು ಸರಿಯಲ್ಲ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ, ಸಮುದಾಯ ಮತ್ತು ಸರಕಾರೇತರ ಸಂಸ್ಥೆಗಳ ಸಹಭಾಗಿತ್ವ ಅವಶ್ಯ ಎಂದು ಹೇಳಿದರು.

ಜೆ.ಎನ್.ಎಂ.ಸಿ. ಸಂಶೋಧನಾ ಘಟಕದ ಡಾ.ಎನ್.ವಿ. ಹೊನ್ನುಂಗರ, ಡಾ. ಅಂಜಲಿ ಜೋಶಿ ಮಾತನಾಡಿದರು. ಜಿಪಂ ಸದಸ್ಯೆ ಶೋಭಾ ಮದಕರಿ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ. ಸದಸ್ಯೆ ಸರಸ್ವತಿ ಕರಡಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ವೈದ್ಯಾಧಿಕಾರಿ ಎಸ್.ವಿ. ಮುನ್ಯಾಳ ಭಾಗವಹಿಸಿದ್ದರು.

ತಾ.ಪಂ. ಸದಸ್ಯೆ ಸುರೇಖಾ ಖಾನಾಪೂರೆ, ಹುಲ್ಲೋಳಿ ಗ್ರಾ.ಪಂ. ಅಧ್ಯಕ್ಷ ರಾಮಪ್ಪ ಹುದ್ದಾರ, ಗುಡಸ್ ಗ್ರಾ.ಪಂ. ಅಧ್ಯಕ್ಷೆ ಸುವರ್ಣ ಪಾಟೀಲ, ಸಾರಾಪುರ ಗ್ರಾ.ಪಂ. ಅಧ್ಯಕ್ಷೆ ಅಸಮತಬಿ ಅಮ್ಮಣಗಿ, ಭೂಪಾಲ ಚೌಗಲಾಡಾ. ಡಾ. ಬಿ.ಎಸ್ ಮದಬಾವಿ, ಡಾ. ಶ್ಯಾಮಲಾ ಪೂಜೇರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹುಲ್ಲೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬರುವ ಹು.ಹಟ್ಟಿ, ಬೆಳವಿ, ಶೇಲಾಪೂರ, ಶಿರಹಟ್ಟಿ ಬಿ.ಕೆ.ಮತ್ತು ಕೆ.ಡಿ., ಸಾರಾಪೂರ, ಬೆಲ್ಲದ ಬಾಗೇವಾಡಿ, ಗುಡಸ್, ಝಂಗಟಿಹಾಳ, ಶಿರಢಾಣ, ಕಡಹಟ್ಟಿ ಗ್ರಾಮಗಳ ಸಮುದಾಯ ಸಮಿತಿ ಸದಸ್ಯರು, ಮಮತೆ ಕಾರ್ಯಕ್ರಮದ ಫಲಾನುಭವಿಗಳು, ಪ್ರೋತ್ಸಾಹಕಿಯರು ಪಾಲ್ಗೊಂಡಿದ್ದರು. ಶಿಕ್ಷಕ ರಾಮು ಗೌಡಾ ಸ್ವಾಗತಿಸಿದರು. ಜಿ.ಎ. ಕರಗುಪ್ಪಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.