ADVERTISEMENT

ಆಲೆಮನೆಯಲ್ಲಿ ಲಾಭ ಕಂಡ ರೈತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 7:07 IST
Last Updated 18 ಜೂನ್ 2017, 7:07 IST
ಆಲೆಮನೆಯಲ್ಲಿ ಬೆಲ್ಲ ತಯಾರಿಸಲು ಕಬ್ಬಿನ ಹಾಲನ್ನು ಕುದಿಸುತ್ತಿರುವ ರೈತ ಬಾಬುರಾವ್ ಪಾಟೀಲ
ಆಲೆಮನೆಯಲ್ಲಿ ಬೆಲ್ಲ ತಯಾರಿಸಲು ಕಬ್ಬಿನ ಹಾಲನ್ನು ಕುದಿಸುತ್ತಿರುವ ರೈತ ಬಾಬುರಾವ್ ಪಾಟೀಲ   

ಪ್ರಸಕ್ತ ಸಾಲಿನಲ್ಲಿ ಬೆಲ್ಲಕ್ಕೆ ಉತ್ತಮ ಬೆಲೆ ಇದೆ. ಹೀಗಾಗಿ ಕೆಲವು ರೈತರು ಸಕ್ಕರೆ ಕಾರ್ಖಾನೆಗಳಿಗೆ ಸ್ವಲ್ಪ ಪ್ರಮಾಣದ ಕಬ್ಬನ್ನು ಕೊಟ್ಟು, ಉಳಿದದ್ದನ್ನು ಆಲೆಮನೆಗಳಿಗೆ ಸಾಗಿಸಿ ಉತ್ತಮ ಬೆಲೆ ದೊರಕಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಮಳೆ ಅಭಾವದಿಂದ ನೀರಿನಕೊರತೆ ಉಂಟಾಗಿ ಕಬ್ಬಿನ ಇಳುವರಿ ಕಡಿಮೆಯಾಗುತ್ತಿದೆ. ಪ್ರಸ್ತಕ ಸಾಲಿನಲ್ಲಿ ಕಾರ್ಖಾನೆಯವರು ಕಡಿಮೆಬೆಲೆಗೆ ಕಬ್ಬು ಕೊಂಡುಕೊಂಡಿದ್ದಾರೆ. 
ರೈತರು ಕಬ್ಬಿನ ಇಳುವರಿ ಬಾರದ್ದರಿಂದ ಹಾಗೂ ಬೆಳೆಯ ಅವಧಿ ಮುಗಿಯದೇ ಇರುವುದರಿಂದ ಕಾರ್ಖಾನೆಗಳಿಗೆ ಕಳುಹಿಸದೆ ತಮ್ಮದೇ ಆಲೆಮನೆಗೆ ಸಾಗಿಸಿ ಉತ್ತಮ ರೀತಿಯ ಬೆಲ್ಲ ತಯಾರಿಸುವಲ್ಲಿ ನಿರತರಾಗಿದ್ದಾರೆ.

ಅಂಥ ರೈತರಲ್ಲಿ ತಾಲ್ಲೂಕಿನ ಬಸ್ತವಾಡ ಗ್ರಾಮದ ಬಾಬುರಾವ್ ಅಣ್ಣಾಸಾಬ್‌ ಪಾಟೀಲ ಕೂಡ ಒಬ್ಬರು. ಅವರು ತಮ್ಮ 40 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದು ಅರ್ಧದಷ್ಟನ್ನು ಕಾರ್ಖಾನೆಗೆ ಕಳಿಸುತ್ತಾರೆ. ಉಳಿದ ಕಬ್ಬನ್ನು ತಮ್ಮ ಆಲೆಮನೆಯಲ್ಲಿ ಬೆಲ್ಲ ತಯಾರಿಸಲು ಉಪಯೋಗಿಸುತ್ತಿದ್ದಾರೆ.

ADVERTISEMENT

ಬೆಲ್ಲ ತಯಾರಿಸಲು ಕಬ್ಬು ಕೊರತೆಯಾದರೆ ಸ್ಥಳೀಯ ರೈತರಿಂದ ಖರೀದಿಸುತ್ತಾರೆ. ಸದ್ಯ ಇವರ ಅಲೆಮನೆಯಲ್ಲಿ 20 ಕೆಲಸಗಾರರಿದ್ದಾರೆ. ಪೂರ್ವಿಕರು ರೂಢಿಸಿಕೊಂಡು ಬಂದಿರುವ ಆಲೆಮನೆಯನ್ನು ತಾವೂ ಕೂಡಾ ಮುಂದು ವರಿಸಿಕೊಂಡು ಹೋಗುತ್ತಿರುವುದಾಗಿ ಬಾಬುರಾವ ಪಾಟೀಲರು ಹೇಳುತ್ತಾರೆ.

‘ಗಾಣ ಮಾಡಲು ಬೇರೆಯವರಿಂದ ₹ 2200 ಕಬ್ಬನ್ನು ಖರೀದಿಸಿರುವೆ. ಸದ್ಯ ಬೆಲ್ಲಕ್ಕೆ ಉತ್ತಮ ದರವಿದ್ದು ಪ್ರತಿ ಕ್ವಿಂಟಲ್‌ಗೆ  ₹ 3800ರಿಂದ ₹ 4200ವರೆಗೆ ಮಾರಾಟವಾಗುತ್ತಿದೆ. ಇದರಿಂದ ಲಾಭವು ಹೆಚ್ಚುತ್ತಿದೆ ಎಂದು ಹೇಳುತ್ತಾರೆ.

‘ಕಬ್ಬಿನ ಇಳುವರಿ ಕಡಿಮೆಯಾದರೆ ಹಾಲಿನ ಅಂಶ ಕಡಿಮೆಯಾಗುವುದು. ಆದ್ದರಿಂದ ಅನಿವಾರ್ಯವಾಗಿ ಬೆಲ್ಲ ತಯಾರಿಸಲು ಸಕ್ಕರೆ ಬಳಸಲಾಗುತ್ತಿದೆ. ಸ್ಥಳೀಯ ರೈತರಿಂದ ಖರೀದಿಸಿದ  ಕಬ್ಬಿಗೆ 20 ದಿನದಲ್ಲಿ ಹಣ ಪಾವತಿ ಮಾಡುತ್ತಿರುವೆ. ಪಂಚಮಿ ಹಬ್ಬಕ್ಕೆ ಬೆಲ್ಲದ ಬೆಲೆ ಹೆಚ್ಚಲಿದೆ ಇದರಿಂದ ಹೆಚ್ಚು ಲಾಭ ದೊರಕುತ್ತದೆ’ ಎಂದು ಅವರು ಹೇಳುತ್ತಾರೆ.

‘ತಯಾರಿಸಿದ ಬೆಲ್ಲವನ್ನು ಸಾಂಗ್ಲಿ ಹಾಗೂ ಮಹಾಲಿಂಗಪೂರ ಮಾರುಕಟ್ಟೆಗೆ ಸಾಗಿಸುತ್ತಿರುವೆ. ಇದರಿಂದ ಉತ್ತಮ ಆದಾಯ ಸಿಗುತ್ತಿದೆ. ರೈತರು ತಾವೇ ಬೆಲ್ಲ ತಯಾರಿಸಿದರೆ ಹೆಚ್ಚು ಲಾಭಗಳಿಸಬಹುದು’ ಎಂದು ಸಲಹೆ ನೀಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.