ADVERTISEMENT

ಇಂದಿರಾ ಕ್ಯಾಂಟೀನ್‌: ನೀತಿಸಂಹಿತೆ ‘ಬಿಸಿ’

ಮಾಜಿ ಪ್ರಧಾನಿ ಇಂದಿರಾಗಾಂಧಿ ಭಾವಚಿತ್ರವನ್ನು ಮುಚ್ಚಲು ಕ್ರಮ

ಎಂ.ಮಹೇಶ
Published 29 ಮಾರ್ಚ್ 2018, 7:02 IST
Last Updated 29 ಮಾರ್ಚ್ 2018, 7:02 IST
ಬೆಳಗಾವಿಯ ನೆಹರೂನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡ
ಬೆಳಗಾವಿಯ ನೆಹರೂನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡ   

ಬೆಳಗಾವಿ: ವಿಧಾನಸಭೆ ಚುನಾವಣೆ ಮಾದರಿ ನೀತಿಸಂಹಿತೆಯ ಬಿಸಿ ಇಂದಿರಾ ಕ್ಯಾಂಟೀನ್‌ಗಳ ಮೇಲೂ ತಟ್ಟಿದೆ.ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಊಟ ಹಾಗೂ ಉಪಾಹಾರ ಒದಗಿಸಬೇಕು, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕು ಎನ್ನುವ ಆಶಯದೊಂದಿಗೆ ರಾಜ್ಯ ಸರ್ಕಾರದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿಯೇ ಮೊದಲಿಗೆ, ಇಲ್ಲಿನ ಹಳೇ ಪಿ.ಬಿ. ರಸ್ತೆಯ ತರಕಾರಿ ಮಾರುಕಟ್ಟೆ ಬಳಿ ನಗರಪಾಲಿಕೆ ಹಾಗೂ ದಂಡುಮಂಡಳಿ ಸಹಯೋಗದಲ್ಲಿ ನಿರ್ಮಿಸಿರುವ ಕ್ಯಾಂಟೀನ್‌ ಅನ್ನು ಇದೇ 12ರಂದು ಉದ್ಘಾಟಿಸಲಾಗಿದೆ. ಉಳಿದಂತೆ, ರುಕ್ಮಿಣಿನಗರ, ಜಿಲ್ಲಾಸ್ಪತ್ರೆ ಬಳಿ, ಎಪಿಎಂಸಿ ರಸ್ತೆಯ ನೆಹರೂ ನಗರದಲ್ಲಿ, ಗೋವಾವೇಸ್‌ ಹಾಗೂ ನಾಥ ಪೈ ವೃತ್ತದಲ್ಲಿ ಆರಂಭಿಸಲು ಉದ್ದೇಶಿಸಿರುವ ಆಹಾರ ತಾಣಗಳು ನಿರ್ಮಾಣದ ಹಂತದಲ್ಲಿವೆ. ನೀತಿಸಂಹಿತೆ ಜಾರಿಯಾಗಿರುವುದರಿಂದ ಇವುಗಳಿಗೆ ಉದ್ಘಾಟನೆ ಭಾಗ್ಯ ಯಾವಾಗ ದೊರೆಯುತ್ತದೆ, ಜನರ ಉಪಯೋಗಕ್ಕೆ ಲಭ್ಯವಾಗುವುದು ಯಾವಾಗ ಎನ್ನುವ ಪ್ರಶ್ನೆಗಳೂ ಮೂಡಿವೆ.

ನಗರದಲ್ಲಿ ಆರು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಒಟ್ಟು 16 ಕ್ಯಾಂಟೀನ್‌ಗಳನ್ನು ಆರಂಭಿಸುವುದಾಗಿ ಹಿಂದೆಯೇ ಪ್ರಕಟಿಸಲಾಗಿತ್ತು. ಜನವರಿ ಆರಂಭದ ವೇಳೆಗೆ ಎಲ್ಲವೂ ಕಾರ್ಯಾರಂಭ ಮಾಡುತ್ತವೆ ಎಂದು ತಿಳಿಸಲಾಗಿತ್ತು. ಆದರೆ, ತ್ವರಿತ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಒಂದನ್ನು ಮಾತ್ರವೇ ತರಾತುರಿಯಲ್ಲಿ ಸಿದ್ಧಪಡಿಸಿ ಉದ್ಘಾಟಿಸಲಾಗಿದ್ದು, ಅಲ್ಲಿ ಕಡಿಮೆ ದರದಲ್ಲಿ ಊಟ (₹ 10) ಹಾಗೂ ಉಪಾಹಾರ (₹ 5) ದೊರೆಯುತ್ತಿದೆ.

ಮಾಸ್ಟರ್‌ ಕಿಚನ್‌ ಸಿದ್ಧವಾಗಿಲ್ಲ: ಕೇಂದ್ರ ಅಡುಗೆ ಸ್ಥಳ (ಮಾಸ್ಟರ್‌ ಕಿಚನ್‌) ನಿರ್ಮಾಣ ಮಾಡಿ ಅಲ್ಲಿಂದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಿಗೂ (ಸಮಯಕ್ಕೆ ಇಂತಿಷ್ಟು ಜನರಿಗೆಂದು) ಉಪಾಹಾರ ಹಾಗೂ ಊಟವನ್ನು ಪೂರೈಸುವುದಕ್ಕೆ ಉದ್ದೇಶಿಸಲಾಗಿದೆ. ಆದರೆ, ನಗರದಲ್ಲಿ ಈವರೆಗೂ ನಗರದಲ್ಲಿ ಮಾಸ್ಟರ್‌ ಕಿಚನ್‌ ನಿರ್ಮಾಣ ಸಾಧ್ಯವಾಗಿಲ್ಲ. ಸದ್ಯಕ್ಕೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು, ತರಕಾರಿ ಮಾರುಕಟ್ಟೆ ಬಳಿಯ ಕ್ಯಾಂಟೀನ್‌ಗೆ ಸರಬರಾಜು ಮಾಡಲಾಗುತ್ತಿದೆ.

ADVERTISEMENT

ನೆಹರೂನಗರದಲ್ಲಿ ಎಂಪಿಎಂಸಿ ರಸ್ತೆಯಲ್ಲಿ ಸಿದ್ಧಗೊಳ್ಳಲಿರುವ ಕ್ಯಾಂಟೀನ್‌ ಹಿಂಬದಿಯ ಸ್ಥಳದಲ್ಲಿ ಮಾಸ್ಟರ್‌ ಕಿಚನ್‌ ನಿರ್ಮಿಸುವುದಕ್ಕೆ ಉದ್ದೇಶಿಸ
ಲಾಗಿದೆ. ಆ ಜಾಗದಲ್ಲಿ ಅಡಿಪಾಯದ ಕಾಮಗಾರಿಯೇ ಇನ್ನೂ ಆರಂಭವಾಗಿಲ್ಲ! ಈಗ, ನೀತಿಸಂಹಿತೆ ಜಾರಿಯಾಗಿರುವುದರಿಂದ ಕ್ಯಾಂಟೀನ್‌ ಹಾಗೂ ಮಾಸ್ಟರ್‌ ಕಿಚನ್‌ ಕಾಮಗಾರಿಗೂ ಗ್ರಹಣ ಬಡಿದಂತಾಗಿದೆ.

ಚುನಾವಣೆ ಮುಗಿಯುವವರೆಗೆ: ಈ ಕ್ಯಾಂಟೀನ್‌ಗಳ ಮೇಲೆ ದೊಡ್ಡದಾಗಿ ಹಾಕಿರುವ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಭಾವಚಿತ್ರದ ಮೇಲೆ, ಚುನಾವಣೆ ಮುಗಿಯುವವರೆಗೆ ಮುಸುಕು ಹಾಕುವುದಕ್ಕೆ ಉದ್ದೇಶಿಸಲಾಗಿದೆ. ‘ಈ ಚಿತ್ರವು ಚುನಾವಣೆ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದು ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ದೊಡ್ಡ ಬಟ್ಟೆಯಿಂದ ಈ ಭಾವಚಿತ್ರವನ್ನು ಮುಚ್ಚಲಾಗುವುದು.ಚುನಾವಣಾ ಆಯೋಗ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದ ಪ್ರಕಾರ ಹೀಗೆ ಮಾಡಲಾಗುತ್ತಿದೆ. ಸಿದ್ಧಗೊಳ್ಳುತ್ತಿರುವ ಕ್ಯಾಂಟೀನ್‌ಗಳ ಉದ್ಘಾಟನೆ ಯಾವಾಗ ಎನ್ನುವ ಬಗ್ಗೆ ನಮಗೂ ಗೊತ್ತಿಲ್ಲ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕ್ಯಾಂಟೀನ್‌ ನಿರ್ಮಿಸಲಾಗುತ್ತಿದೆ. ನಿರ್ವಹಣಾ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳು ಆಂತರಿಕ ಸಂಪನ್ಮೂಲದಿಂದ ಭರಿಸಬೇಕಾಗುತ್ತದೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ಅಲ್ಲದೇ, ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎನ್ನುವುದರ ಮೇಲೆ ಈ ಕ್ಯಾಂಟೀನ್‌ಗಳ ಭವಿಷ್ಯ ನಿರ್ಧಾರವಾಗಲಿದೆ’ ಎನ್ನುತ್ತಾರೆ ಅವರು.

**

ಜಿಲ್ಲೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯಕ್ಕೆ ಉದ್ಘಾಟಿಸಲು ಆಗುವುದಿಲ್ಲ – ಎಸ್‌. ಜಿಯಾವುಲ್ಲಾ, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.