ADVERTISEMENT

ಎನ್‌ಸಿಪಿ ಅಭ್ಯರ್ಥಿ ಪರ ಪತ್ನಿಯರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 6:56 IST
Last Updated 10 ಏಪ್ರಿಲ್ 2014, 6:56 IST

ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ರಾಷ್ಟ್ರೀಯತಾವಾದಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ­ಯಾಗಿ ಚುನಾವಣಾ ಕಣಕ್ಕೆ ಇಳಿದಿರುವ ಪ್ರತಾಪರಾವ ಪಾಟೀಲ ಪರವಾಗಿ ಅವರ ಇಬ್ಬರು ಪತ್ನಿಯರೂ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

’ರಾಯಬಾಗದ ಹುಲಿ’ ಎಂದೇ ಚಿರಪರಿಚಿತರಾಗಿರುವ ಮಾಜಿ ಸಚಿವ ದಿ.ವಸಂತರಾವ ಪಾಟೀಲ ಅವರ ಪುತ್ರ ಪ್ರತಾಪರಾವ ಪಾಟೀಲ ಪ್ರಸಕ್ತ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ.  ಪ್ರಚಾರಕ್ಕೆ ಅವರ ಪತ್ನಿಯರಾದ ಲಾಜುಬಾಯಿ ಮತ್ತು ಮಂಗಲಾ ಪಾಟೀಲ ಅವರೂ ಸಾಥ್‌ ನೀಡಿದ್ದಾರೆ. ಮಹಿಳೆಯರು ಮತ್ತು ಗ್ರಾಮಸ್ಥರೊಂದಿಗೆ ಲೋಕಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಬುಧವಾರ ತಾಲ್ಲೂಕಿನ ಹುನ್ನರಗಿ ಗ್ರಾಮದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಪಾಟೀಲ ಸಹೋದರಿಯರು, ‘ ಎನ್‌ಸಿಪಿಯಿಂದ ಸ್ಪರ್ಧಿಸಿರುವ ತಮ್ಮ ಯಜಮಾನರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳಲು ಕಳೆದ 8–10 ದಿನಗಳಿಂದ ಕುಡಚಿ, ನಿಪ್ಪಾಣಿ, ರಾಯಬಾಗ, ಅಥಣಿ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದು, ಜನ ಬೆಂಬಲ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಜನರು ಕುಡಿಯುವ ನೀರಿನ ಸಮಸ್ಯೆ ಕುರಿತು ಹೇಳಿಕೊಳ್ಳುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸುತ್ತಿದ್ದು, ಮತದಾರರು ಎನ್‌ಸಿಪಿ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ತಮಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.