ADVERTISEMENT

ಎಸಿಪಿಆರ್‌ನಲ್ಲಿ ಅತ್ಯಾಧುನಿಕ ಗ್ರಂಥಾಲಯ

ನವದೆಹಲಿಯ ರಾಮಕೃಷ್ಣ ಮಿಷನ್‌ನಲ್ಲಿರುವ ಮಾದರಿಯ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 6:55 IST
Last Updated 4 ಜೂನ್ 2018, 6:55 IST

ಬೆಳಗಾವಿ: ಇಲ್ಲಿನ ಹಿಂದವಾಡಿಯಲ್ಲಿ ಗುರುದೇವ ಡಾ.ಆರ್‌.ಡಿ. ರಾನಡೆ ಅವರ ಹೆಸರಿನಲ್ಲಿ, ಧರ್ಮದರ್ಶನಗಳ ಕಾರ್ಯದಲ್ಲಿ ತೊಡಗಿರುವ ಎಸಿಪಿಆರ್‌ (ಅಕಾಡೆಮಿ ಅಫ್‌ ಕಂಪೇರಿಟಿವ್‌ ಫಿಲಾಸಫಿ ಅಂಡ್‌ ರಿಲಿಜಿಯನ್‌) ಆವರಣದಲ್ಲಿ ಶೀಘ್ರವೇ ಅತ್ಯಾಧುನಿಕ ಹಾಗೂ ಸುಸಜ್ಜಿತ ಗ್ರಂಥಾಲಯ ಸಿದ್ಧಗೊಳ್ಳಲಿದೆ.

ಸಂಪೂರ್ಣ ಹಸಿರು ಪರಿಸರ ಹಾಗೂ ಪ್ರಶಾಂತ ವಾತಾವರಣ ಹೊಂದಿರುವ ಈ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ಗ್ರಂಥಭಂಡಾರವನ್ನು ಹೊಂದುವುದಕ್ಕಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ವಿಷಯಗಳ ಪುಸ್ತಕಗಳನ್ನು ಒದಗಿಸುವ ಉದ್ದೇಶವನ್ನು ಅಕಾಡೆಮಿ ಹೊಂದಿದೆ. ಈಗಾಗಲೇ ಒಂದಷ್ಟು ಪುಸ್ತಕಗಳನ್ನು ಖರೀದಿಸಲಾಗಿದ್ದು, ಮತ್ತೊಂದಷ್ಟು ಪುಸ್ತಕಗಳನ್ನು ಸಂಗ್ರಹಿಸಲಾಗುತ್ತಿದೆ. ತಿಂಗಳಲ್ಲಿ ಗ್ರಂಥಾಲಯ ಸಾರ್ವಜನಿಕರಿಗೆ ಸಮರ್ಪಣೆಯಾಗಲಿದೆ.

ADVERTISEMENT

‘ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಾಣದ ಯೋಜನೆ ಹಾಕಿಕೊಂಡಿದ್ದೇವೆ. ನವದೆಹಲಿಯ ರಾಮಕೃಷ್ಣ ಮಿಷನ್‌ನಲ್ಲಿರುವ ಮಾದರಿಯಲ್ಲಿ ಇಲ್ಲಿಯೂ ಗ್ರಂಥಾಲಯ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿ
ಗಳು, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರು, ಆಸಕ್ತರು ಇಲ್ಲಿಗೆ ಬಂದು ಪುಸ್ತಕಗಳನ್ನು ಉಚಿತವಾಗಿ ಪಡೆದು ಓದಬಹುದು. ವಿಶೇಷವಾಗಿ ಐಎಎಸ್‌, ಕೆಎಎಸ್‌ ಅಧಿಕಾರಿಗಳಾಗಬೇಕು ಎಂಬ ಹಂಬಲ ಉಳ್ಳವರಿಗೆ ನೆರವಾಗುವ ಪುಸ್ತಕಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು’ ಎಂದು ಅಕಾಡೆಮಿ ಕಾರ್ಯದರ್ಶಿ ಎಂ.ಬಿ. ಝಿರಲಿ ತಿಳಿಸಿದರು.

‘₹ 10 ಲಕ್ಷ ವೆಚ್ಚದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 3 ಲಕ್ಷದಷ್ಟು ಪುಸ್ತಕಗಳನ್ನು ಖರೀದಿಸ
ಲಾಗಿದೆ. ರೋಟರಿ ಮೊದಲಾದ ಸಂಘ ಸಂಸ್ಥೆಗಳೂ ಕೈಜೋಡಿಸಲು ಮುಂದೆ ಬಂದಿವೆ. ₹ 2 ಲಕ್ಷ ದೇಣಿಗೆ ಬಂದಿದೆ. ಡಿಜಿಟಲ್‌ ಗ್ರಂಥಾಲಯದ ಸೌಲಭ್ಯವೂ ಇಲ್ಲಿರಲಿದೆ. ಇದರಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಜ್ಞಾನ ಸಂಪಾದನೆಗೆ ನೆರವಾಗ
ಲಿದೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಮಾರ್ಗದರ್ಶನವೂ ದೊರೆತಂತಾಗುತ್ತದೆ’ ಎಂದು ಅವರು ಹೇಳಿದರು.

1952ರಲ್ಲಿ ಸ್ಥಾಪನೆಯಾದ ಅಕಾಡೆಮಿಯು ಧರ್ಮ ಹಾಗೂ ತತ್ವಶಾಸ್ತ್ರದ ತೌಲನಿಕ ಅಧ್ಯಯನದಲ್ಲಿ ತೊಡಗಿದೆ. ಧರ್ಮದರ್ಶನ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.