ADVERTISEMENT

ಕತ್ತಲಲ್ಲಿ ಮುಳುಗಿದ ಖಾನಾಪುರ

​ಪ್ರಜಾವಾಣಿ ವಾರ್ತೆ
Published 23 ಜೂನ್ 2015, 8:53 IST
Last Updated 23 ಜೂನ್ 2015, 8:53 IST
ಕತ್ತಲಲ್ಲಿ ಮುಳುಗಿದ ಖಾನಾಪುರ
ಕತ್ತಲಲ್ಲಿ ಮುಳುಗಿದ ಖಾನಾಪುರ   

ಖಾನಾಪುರ: ಕಳೆದ ಶುಕ್ರವಾರ ಸಂಜೆಯಿಂದ ಶುರುವಾರ ವರ್ಷಧಾರೆ ಸೋಮವಾರವೂ ಮುಂದುವರೆದ ಪರಿಣಾಮ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಅರಣ್ಯದಂಚಿನ ನೂರಕ್ಕೂ ಹೆಚ್ಚು ಗ್ರಾಮಗಳು ಕಳೆದ ಎರಡು ದಿನಗಳಿಂದ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿವೆ.

ಲೋಂಡಾ, ಜಾಂಬೋಟಿ, ಗರ್ಲಗುಂಜಿ, ಮಾಡಿಗುಂಜಿ, ಕಣಕುಂಬಿ, ಹೆಮ್ಮಡಗಾ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳುವ ವಿದ್ಯುತ್ ಕಂಬಗಳು ಹಾಗೂ ಮರಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಭಾರಿ ಮಳೆಯ ಪರಿಣಾಮ ಮಲ ಪ್ರಭಾ, ಮಹದಾಯಿ, ಪಾಂಡರಿ, ಪಂಚ ಶೀಲಾ ನದಿಗಳಲ್ಲಿ ನೀರಿನ ಹರಿವು ಕ್ರಮೇಣ ಹೆಚ್ಚಿದೆ. ಎಡೆಬಿಡದೇ ಸುರಿ ಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಚಿಕಲೆ, ಚಿಗುಳೆ, ಕಾಲಮನಿ ಗ್ರಾಮಗಳ ಸುತ್ತಮುತ್ತ ಮರಗಳು ಧರೆಗುರುಳಿ ಸಂಚಾರಕ್ಕೆ ತೊಂದರೆ ಯಾಗಿದೆ. ಕಣಕುಂಬಿ ಬಳಿಯ ಬೇಟನೆ ಗ್ರಾಮದಲ್ಲಿ ಭಾನುವಾರ ಸಂಜೆ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಬೀಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ.

ಚಿಕಲೆ ಗ್ರಾಮದಲ್ಲಿ ಭಾರೀ ಗಾತ್ರದ ಮರವೊಂದು ಬಿದ್ದು, ಐದು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಬೆಳಗಾವಿ ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಕೆಲವು ಮರಗಳು ಧರೆಗುರುಳಿದ ಪರಿಣಾಮ ಸಂಚಾರಕ್ಕೆ ವ್ಯತ್ಯಯ ಉಂಟಾದ ವರದಿಯಾಗಿದೆ.

ಶನಿವಾರ ಹಾಗೂ ರವಿವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಸೋಮವಾರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದು ದಿನದ ಮಟ್ಟಿಗೆ ರಜೆಯನ್ನು ಘೋಷಿಸಿ ಬಿಇಒ ಎಸ್ ಜೆ ಅಂಚಿ ಆದೇಶಿಸಿದ್ದರು. ಸೋಮ ವಾರ ಮಧ್ಯಾಹ್ನದ ನಂತರ ಮಳೆಯ ಆರ್ಭಟ ಕಡಿಮೆಯಾದ ಕಾರಣ ಮಂಗಳವಾರ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ವಿಪರೀತ ಮಳೆಯ ಪರಿಣಾಮ ಪಟ್ಟಣದ ಹೊರವಲಯದಲ್ಲಿ ಹರಿಯುವ ಕುಂಬಾರ ಹಳ್ಳದಲ್ಲಿ ಪ್ರವಾಹ ಉಂಟಾಗಿ ಕೆಲ ಗಂಟೆಗಳ ಕಾಲ ಅಸೋಗಾ, ಮಂಚಾಪುರ, ಕುಟಿನೋನಗರ ಹಾಗೂ ಭೋಸಗಾಳಿ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡ ವರದಿಯಾಗಿದೆ.

ಪಟ್ಟಣದ ಹಳೆಯ ಸೇತುವೆ ಜಲಾವೃತಗೊಂಡಿದ್ದು, ನೇರಸಾ ಗವ್ವಾಳಿ, ಚಿಕಲೆ ಅಮಗಾಂವ, ಮೋದೆಕೊಪ್ಪ ಕೌಲಾಪುರವಾಡಾ, ಚಿಕಲೆ ಪಾರವಾಡ ನಡುವಿನ ಸೇತುವೆಗಳ ಮೇಲೆ ಅಪಾಯಮಟ್ಟದಲ್ಲಿ ನೀರು ಹರಿಯುತ್ತಿರುವ ಕಾರಣ ಈ ಗ್ರಾಮಗಳ ನಡುವಿನ ರಸ್ತೆ ಸಂಚಾರ ರವಿವಾರದಿಂದ ಸ್ಥಗಿತಗೊಂಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಅಸೋಗಾದಲ್ಲಿ 130 ಮಿ.ಮೀ, ಬೀಡಿಯಲ್ಲಿ 65.2 ಮಿ.ಮೀ, ಕಕ್ಕೇರಿಯಲ್ಲಿ 35.8 ಮಿ.ಮೀ, ಗುಂಜಿ ಯಲ್ಲಿ 158.4 ಮಿ.ಮೀ, ಲೋಂಡಾ ರೈಲು ನಿಲ್ದಾಣದಲ್ಲಿ 130 ಮಿ.ಮೀ, ಲೋಂಡಾ ಪಿ.ಡಬ್ಲ್ಯೂ.ಡಿಯಲ್ಲಿ 101.2 ಮಿ.ಮೀ, ನಾಗರಗಾಳಿಯಲ್ಲಿ 46.4 ಮಿ.ಮೀ, ಜಾಂಬೋಟಿಯಲ್ಲಿ 140 ಮಿ.ಮೀ, ಕಣಕುಂಬಿಯಲ್ಲಿ 205 ಮಿ.ಮೀ ಹಾಗೂ ಖಾನಾಪುರ ಪಟ್ಟಣದಲ್ಲಿ 55.4 ಮಿ.ಮೀ ಮಳೆಯಾದ ವರದಿಯಾಗಿದೆ.

ಸಂಕೇಶ್ವರದಲ್ಲಿ ಭಾರಿ ಮಳೆ
ಸಂಕೇಶ್ವರ
: ಸಂಕೇಶ್ವರ ಹಾಗೂ ಸುತ್ತಮುತ್ತಲಪ್ರದೇಶಗಳಲ್ಲಿ ಸೋಮ ವಾರ ಭಾರಿ ಮಳೆ ಸುರಿಯಿತು.
ಬೆಳಿಗ್ಗೆ 6 ಗಂಟೆಯಿಂದಲೇ ಆರಂಭ ವಾದ  ಮಳೆ ಮಧ್ಯಾಹ್ನ 12 ಗಂಟೆ ಯವರೆಗೂ ಸುರಿಯಿತು. ಭಾರಿ ಗಾಳಿಯೂ ಬೀಸುತ್ತಿರುವುದರಿಂದ ಮಧ್ಯಾಹ್ನದ ನಂತರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.