ADVERTISEMENT

‘ಕಬ್ಬಿಗೆ ಪಾಟೀಲ ವೈಜ್ಞಾನಿಕ ದರ ನೀಡಲಿ’

ಮದಬಾವಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಸವಾಲ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 8:54 IST
Last Updated 11 ಏಪ್ರಿಲ್ 2018, 8:54 IST

ಮೋಳೆ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಶ್ರೀಮಂತ ಪಾಟೀಲ ಅವರು ರೈತರ ಹಿತ ಕಾಪಾಡುವ ಭರವಸೆ ನೀಡುವ ಬದಲು ತಮ್ಮ ಕಾರ್ಖಾ ನೆಗೆ  ಕಬ್ಬು ಕಳಿಸಿದ ರೈತರಿಗೆ ವೈಜ್ಞಾನಿಕ ಬೆಲೆ ಕೊಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಸವಾಲ್‌ ಹಾಕಿದರು.

ಸೋಮವಾರ ಮದಬಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಪಕ್ಷಾಂತರ ಮಾಡಿರುವ ಶ್ರೀಮಂತ ಪಾಟೀಲರಿಗೆ ರೈತರು ಈಗ ನೆನಪಾಗಿದ್ದಾರೆ. ರೈತರ ಹಿತ ಕಾಪಾಡಲು ಬದ್ಧ ಎಂದು ಜಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರು ಪೂರೈಸಿದ ಪ್ರತಿ ಟನ್ ಕಬ್ಬಿಗೆ ₹ 2900 ನೀಡಿದೆ. ರೈತರಿಗೆ ಸೂಕ್ತ ದರ ನೀಡಿದ ರಾಜ್ಯದಲ್ಲಿಯೇ ಪ್ರಥಮ ಕಾರ್ಖಾನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಅವರು ಪ್ರತಿಟನ್‌ ಕಬ್ಬಿಗೆ ಕೇವಲ ₹ 2500 ದರ ನೀಡುತ್ತಿದ್ದಾರೆ. ಇದು ಹೇಗೆ ರೈತರ ಹಿತವಾಗುತ್ತದೆ ಎಂದು ರೈತರೇ ಹೇಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹೊಂದಿದೆ. ಕರ್ನಾಟಕ ಶೀಘ್ರದಲ್ಲಿ 23ನೇ ರಾಜ್ಯವಾಗಲಿದೆ ಎಂದರು.

ಕಾಗವಾಡ ಶಾಸಕ ರಾಜು ಕಾಗೆ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಗಳಾಗಿದ್ದ ಸಂದರ್ಭದಲ್ಲಿಯೇ ಬಸವೇಶ್ವರ ಏತ ನೀರಾವರಿ ಯೋಜನೆಗೆ ಮಂಜೂರಾತಿ ಸಿಕ್ಕಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಕಾಮಗಾರಿ ಪ್ರಾರಂಭಿಸಿದ್ದರೆ ಇಷ್ಟೊತ್ತಿಗೆ ರೈತರ ಭೂಮಿಗಳಲ್ಲಿ ನೀರು ಬರುತ್ತಿತ್ತು. ಆದರೆ ಅಥಣಿ ತಾಲ್ಲೂಕಿನಲ್ಲಿ ಇಬ್ಬರು ಬಿಜೆಪಿ ಶಾಸಕರು  ಇರುವುದರಿಂದ  ಕಾಂಗ್ರೆಸ್‌  ಯೋಜನೆಗೆ ಚಾಲನೆ ನೀಡಲು ಹಿಂದೇಟು ಹಾಕಿ, ಚುನಾವಣೆಯ ಹೊಸ್ತಿಲಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರದ ಸ್ಟಾರ್‌  ಪ್ರಚಾರಕ ಗೋಪಿಚಂದ ಪಡೋಳ್ಕರ, ಕುಡಚಿ ಶಾಸಕ ಪಿ. ರಾಜೀವ ಮಾತನಾಡಿದರು. ‌ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ, ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಉಪಾಧ್ಯಕ್ಷ ಜ್ಯೋತಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಅಜಿತ್‌  ಚೌಗುಲೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾಥಗೌಡ ಪಾಟೀಲ, ಶೀತಲಗೌಡ ಪಾಟೀಲ, ಗಜಾನನ ಯರಂಡೋಲಿ, ರವಿ ಪೂಜಾರಿ, ನಿಜಗುಣಿ ಮಗದುಮ್, ಶಿವಾನಂದ ಮಗದುಮ್, ರವಿಂದ್ರ ಪಾಚಿಂಗೆ, ನಿಂಗಪ್ಪ ಖೋಕಲೆ, ಸುಶೀಲಕುಮಾರ ಪತ್ತಾರ, ಬಾಹುಸಾಹೇಬ ಜಾಧವ, ರಾಮಗೌಡ ಪಾಟೀಲ (ಶಿರಗುಪ್ಪಿ), ಗುಳಪ್ಪ ಜತ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.