ADVERTISEMENT

ಕಬ್ಬಿಗೆ ಬೆಂಬಲ ಬೆಲೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 10:15 IST
Last Updated 9 ಅಕ್ಟೋಬರ್ 2012, 10:15 IST

ಚಿಕ್ಕೋಡಿ: ಸಕ್ಕರೆ ಕಾರ್ಖಾನೆಗಳು ಲಾಭ ಗಳಿಸುತ್ತಿದ್ದರೂ ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ಕಬ್ಬು ಬೆಳೆಗೆ ನ್ಯಾಯಯುತವಾದ ಬೆಲೆ ನೀಡದೇ ಕಬ್ಬು ಬೆಳೆಗಾರರ ಶೋಷಣೆ ಮಾಡುತ್ತಿವೆ ಎಂದು ಮಹಾರಾಷ್ಟ್ರದ ಹಾತಕಣಗಲಾ ಸಂಸದ, ಸ್ವಾಭಿಮಾನಿ ರೈತ ಸಂಘಟನೆ ಸಂಸ್ಥಾಪಕ ರಾಜು ಶೆಟ್ಟಿ ಆರೋಪಿಸಿದರು.
ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ  ಸ್ವಾಭಿಮಾನಿ ರೈತ ಸಂಘಟನೆಯು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ರೈತ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ದೇಶದ ಬೆನ್ನೆಲುಬು ಎಂದೇ ಪರಿಗಣಿಸಲ್ಪಡುವ ಕೃಷಿಕರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಸಂಘಟಿತರಾಗಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ಉದ್ದೇಶದಿಂದಲೇ ಸ್ವಾಭಿಮಾನಿ ರೈತ ಸಂಘಟನೆಯನ್ನು ಹುಟ್ಟು ಹಾಕಲಾಗಿದೆ. ಇಂದು ಕಾರ್ಖಾನೆಗಳು ಕಬ್ಬು ಬೆಳೆಗೆ ಯೋಗ್ಯ ಬೆಲೆ ನೀಡಲು ಹಿಂದೇಟು ಹಾಕುತ್ತಿವೆ. ಕಾರ್ಖಾನೆಗಳು ಲಾಭದಲ್ಲಿದ್ದರೂ ಪ್ರತಿ ಟನ್ ಕಬ್ಬಿಗೆ ಕೇವಲ ರೂ 2250  ದರ ನೀಡುತ್ತಿವೆ. ಇದು ಅತಿ ಕನಿಷ್ಠ ಬೆಲೆಯಾಗಿದೆ ಎಂದರು.

ಗುಜರಾತಿನ  ಕಾರ್ಖಾನೆಯೊಂದು ಪ್ರತಿಟನ್‌ಗೆ ರೂ 3500 ನೀಡುತ್ತಿದೆ. ಅದರ ರಿಕವರಿ ಕೇವಲ 11.7 ರಷ್ಟಿದೆ. ಆದರೆ, ನಮ್ಮಲ್ಲಿನ ಕಾರ್ಖಾನೆಗಳ ರಿಕವರಿ 12.50 ರಷ್ಟಿದ್ದರೂ ಕಬ್ಬಿಗೆ ಉತ್ತಮ ಬೆಲೆ ಯಾಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದೇ 27 ರಂದು ಜಯಸಿಂಗಪುರದಲ್ಲಿ ನಡೆಯಲಿರುವ ಕಬ್ಬು ಬೆಳೆಗಾರರ ಸಮಾವೇಶದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವ ತನಕ ಯಾವುದೇ ಕೃಷಿಕರು ಕಬ್ಬು ಕಟಾವು ಮಾಡಲು ಅವಕಾಶ ನೀಡಬಾರದು ಹೇಳಿದರು.

ರೈತ ಮುಖಂಡರಾದ ರಾಜು ಖಿಚಡೆ, ಉಲ್ಲಾಸ ಪಾಟೀಲ ಮತ್ತು  ಪ್ರಕಾಶ ಪಾಟೀಲ ಮಾತನಾಡಿದರು. ರಮೇಶ ಪಾಟೀಲ, ಪಂಕಜ ತಿಪ್ಪಣ್ಣವರ, ತಾತ್ಯಾಸಾಬ ಬಸನ್ನವರ, ಈರಗೌಡ ಪಾಟೀಲ, ರಾಹುಲ್ ಘಾಟಗೆ, ಪಿ.ರಾಜು, ಆದಿನಾಥ ಹೆಮ್ಮಗಿರೆ, ಅನಿಲಸಾಗರ ಮದನಾಯಿಕ, ರಾಜು ಕಮತೆ, ಅಂಕಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಕೃಷಿಕರು ಹಾಜರಿದ್ದರು.

ವರ್ಧಮಾನ ಬನವಣೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.