ADVERTISEMENT

ಕಲುಷಿತ ನೀರು: ನಿಪ್ಪಾಣಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 9:03 IST
Last Updated 7 ಡಿಸೆಂಬರ್ 2013, 9:03 IST
ನಿಪ್ಪಾಣಿಯಲ್ಲಿ ಕಲುಷಿತ ನೀರು ಕುಡಿದು ನಾಗರಿಕರು ವಾಂತಿ–ಭೇದಿಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯ ಜುಬೇರ ಬಾಗವಾನ ಮತ್ತು ನಾಗರಿಕರು 24 ಗಂಟೆ ನೀರು ಪೂರೈಕೆ ಯೋಜನೆಯ ಗುತ್ತಿಗೆದಾರ ಕಂಪೆನಿ ಅಧಿಕಾರಿಗಳಿಗೆ ಶುಕ್ರವಾರ ತರಾಟೆಗೆ ತೆಗೆದುಕೊಂಡರು.
ನಿಪ್ಪಾಣಿಯಲ್ಲಿ ಕಲುಷಿತ ನೀರು ಕುಡಿದು ನಾಗರಿಕರು ವಾಂತಿ–ಭೇದಿಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯ ಜುಬೇರ ಬಾಗವಾನ ಮತ್ತು ನಾಗರಿಕರು 24 ಗಂಟೆ ನೀರು ಪೂರೈಕೆ ಯೋಜನೆಯ ಗುತ್ತಿಗೆದಾರ ಕಂಪೆನಿ ಅಧಿಕಾರಿಗಳಿಗೆ ಶುಕ್ರವಾರ ತರಾಟೆಗೆ ತೆಗೆದುಕೊಂಡರು.   

ನಿಪ್ಪಾಣಿ: ನೀರಿನ ನಲ್ಲಿಯಲ್ಲಿ ಶೌಚಾಲಯದ ನೀರು ಬಂದಿದ್ದರಿಂದ ವಾಂತಿ–ಭೇದಿ ಪ್ರಕರಣಗಳು ನಗರದಲ್ಲಿ ಕಂಡುಬಂದಿದ್ದು ಇದನ್ನು ನಾಗರಿಕರು ತೀವ್ರವಾಗಿ ಪ್ರತಿಭಟಿಸಿದರು.

ನಗರದಲ್ಲಿ ಜಾರಿಯಲ್ಲಿದ್ದ 24 ಗಂಟೆ ನೀರು ಪೂರೈಕೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲಿ ಪ್ರಭಾತ ಚಿತ್ರಮಂದಿರದ

ಹತ್ತಿರದ ಪೈಪ್ ಒಡೆದಿದ್ದರಿಂದ ಈ ಘಟನೆ ಸಂಭವಿಸಿದೆ.

ಸಾರ್ವಜನಿಕ ಶೌಚಾಲಯದಿಂದ ಬಸಿದು ಬರುವ ನೀರು ಕುಡಿಯುವ ನೀರಿನ ಪೈಪ್‌ನಲ್ಲಿ ಸೇರಿಕೊಂಡಿದ್ದರಿಂದ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ಐವರು ಸದಸ್ಯರು ಐದಾರು ದಿನಗಳಿಂದ ವಾಂತಿ–ಭೇದಿಯಿಂದ ಬಳಲುತ್ತಿದ್ದಾರೆ ಎಂದು ನಿರಾಳೆ ಗಲ್ಲಿಯ ನಿವಾಸಿ ಅಜೀತ  ಸ್ವಾಮಿ ಪ್ರಜಾವಾಣಿಗೆ ತಿಳಿಸಿದರು. ಪ್ರಭಾತ ಚಿತ್ರಮಂದಿರದ ಹತ್ತಿರದ ಶೇತವಾಳ ಗಲ್ಲಿ, ನಿರಾಳೆ ಗಲ್ಲಿ, ಮಗದುಮ್‌ ಗಲ್ಲಿ, ಮಾನವಿ ಗಲ್ಲಿ ಮುಂತಾದ ಹಲವೆಡೆ ಸುಮಾರು 20ಕ್ಕಿಂತ ಹೆಚ್ಚು ಜನರು ಕಲುಷಿತ ನೀರು ಕುಡಿದು ವಾಂತಿ–ಭೇದಿಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶುಕ್ರವಾರ ಸ್ಥಳಕ್ಕೆ ಧಾವಿಸಿದ ನಗರಸಭೆ ಸದಸ್ಯ ಜುಬೇರ ಬಾಗವಾನ, ವಿಲಾಸ ಗಾಡಿವಡ್ಡರ, ಪ್ರಸಾದ ಬುರುಡ, ಶಿರೀಷ ಕಮತೆ, ಪೌರಾಯುಕ್ತ ಬಿ.ಆರ್‌. ಮಂಗಸೂಳಿ, ಅಧಿಕಾರಿಗಳು, ಯೋಜನೆಯ ಕಾಮಗಾರಿ ಕೈಗೊಂಡ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಾಗರಿಕರು ಬಾಟಲಿಯಲ್ಲಿ ತುಂಬಿಟ್ಟಿದ್ದ ಕಲುಷಿತ ನೀರು ತೋರಿಸಿದರು.
ತಕ್ಷಣ ದುರಸ್ತಿ ಕೆಲಸ ಕೈಗೊಂಡು ಒಂದು ದಿನದಲ್ಲಿ ಪೂರ್ಣಗೊಳಿಸುವಂತೆ ಸದಸ್ಯರು ಹಾಗೂ ನಾಗರಿಕರು ಗುತ್ತಿಗೆದಾರರಿಗೆ ಮತ್ತು ನಗರಸಭೆ ಅಧಿಕಾರಿಗಳಿಗೆ ಆದೇಶಿಸಿದರು.

ಇಲ್ಲದಿದ್ದಲ್ಲಿ ಗುತ್ತಿಗೆದಾರ ಕಂಪೆನಿಯ ಅಧಿಕಾರಿಗಳಿಗೆ ಕಲುಷಿತ ನೀರು ಕುಡಿಸಲಾಗುವುದೆಂದು ಎಚ್ಚರಿಸಿದರು. ಕುಡಿಯುವ ನೀರಿನ ಪೈಪ್‌ ದುರಸ್ತಿ ಕೆಲಸ ರಾತ್ರಿಯವರೆಗೆ ಭರದಿಂದ ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT