ADVERTISEMENT

ಕಸದ ತೊಟ್ಟಿಯಾದ ಸರ್ಕಾರಿ ಕಚೇರಿ ಆವರಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:01 IST
Last Updated 18 ಜುಲೈ 2017, 7:01 IST
ಚಿಕ್ಕೋಡಿ ಪಟ್ಟಣದಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿ ಹಳೆ ಕಟ್ಟಡ ಬಳಿ ನಿರ್ಮಾಣಗೊಂಡಿರುವ ಕಸದ ರಾಶಿ
ಚಿಕ್ಕೋಡಿ ಪಟ್ಟಣದಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿ ಹಳೆ ಕಟ್ಟಡ ಬಳಿ ನಿರ್ಮಾಣಗೊಂಡಿರುವ ಕಸದ ರಾಶಿ   

ಚಿಕ್ಕೋಡಿ: ಕಳೆದೊಂದು ದಶಕದ ಆಚೆ ಚಿಕ್ಕೋಡಿ ಉಪವಿಭಾಗೀಯ ಆಡಳಿತ ಯಂತ್ರದ ಶಕ್ತಿ ಕೇಂದ್ರವಾಗಿದ್ದ ಪಟ್ಟಣದ ಇಂದಿರಾನಗರ ಬಳಿ ಎನ್‌–ಎಂ ರಸ್ತೆಗೆ ಹೊಂದಿಕೊಂಡಿರುವ ಉಪವಿಭಾಗಾಧಿಕಾರಿಗಳ ಹಳೆಯ ಕಚೇರಿ ಕಟ್ಟಡ ಇಂದು ಮೂತ್ರ ವಿಸರ್ಜನೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.

ಪಟ್ಟಣದಲ್ಲಿ ಸರ್ಕಾರ ಮಿನಿ ವಿಧಾನಸೌಧ ಕಟ್ಟಡ ನಿರ್ಮಿಸಿದ ಬಳಿಕ ಉಪವಿಭಾಗಾಧಿಕಾರಿಗಳ ಕಚೇರಿ, ಭೂದಾಖಲೆಗಳ ಸಹಾಯಕ ಉಪನಿರ್ದೇಶಕರ ಕಚೇರಿಗಳನ್ನು ಈ ಹಳೆ ಕಟ್ಟಡದಿಂದ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ನಿರುಪಯುಕ್ತ ಸ್ಥಿತಿಯಲ್ಲಿರುವ ಎರಡು ಅಂತಸ್ತಿನ ಈ ಕಟ್ಟಡ ಶಿಥಿಲಗೊಂಡಿದೆ.

ಕಟ್ಟಡದ ಬಳಿ ಕಸದ ರಾಶಿಯೇ ನಿರ್ಮಾಣಗೊಂಡಿದೆ. ಮೂತ್ರ ವಿಸರ್ಜನೆಯ ತಾಣವಾಗಿದೆ. ಧ್ವಜಸ್ತಂಭದ ಬಳಿಯೇ ಮೂತ್ರ ವಿಸರ್ಜನೆ ಮಾಡಲಾಗುತ್ತದೆ. ಅಲ್ಲದೇ ಅಲ್ಲಿ ಕಸಕಡ್ಡಿ, ಮದ್ಯದ ಟೆಟ್ರಾ ಪ್ಯಾಕ್‌ಗಳೂ ಬಿದ್ದಿವೆ. ಈ ಪರಿಸರದಲ್ಲಿ ದುರ್ಗಂಧ ಮನೆ ಮಾಡಿದೆ.

ADVERTISEMENT

ಪುರಸಭೆ ಈ ಕಟ್ಟಡದ ಪರಿಸರದ ಸ್ವಚ್ಛತೆಯತ್ತ ಗಮನ ಹರಿಸುತ್ತಿಲ್ಲ. ಕಟ್ಟಡದ ಸುತ್ತಮುತ್ತ ಜನವಸತಿ ಇದ್ದು, ಸೊಳ್ಳೆ, ವಿಷ ಜಂತುಗಳ ಕಾಟ ಎದುರಿಸುವಂತಾಗಿದೆ. ಅಲ್ಲದೇ, ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳು ಇದೇ ಕಟ್ಟಡದ ಆವರಣದಲ್ಲಿ ಮದ್ಯ ಸೇವನೆಯನ್ನೂ ಮಾಡುತ್ತಾರೆ.

ಸಂಬಂಧಪಟ್ಟವರು ಇಂತಹ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಶಿಥಿಲಗೊಂಡಿರುವ ಈ ಕಟ್ಟಡವನ್ನು ನೆಲಸಮಗೊಳಿಸಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿಕೆ ನೀಡಿ ಐದಾರು ತಿಂಗಳು ಗತಿಸಿವೆ. ಆದರೂ, ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. 

‘ಉಪವಿಭಾಗೀಯ ಕೇಂದ್ರ ಸ್ಥಾನವಾಗಿರುವ ಚಿಕ್ಕೋಡಿಯಲ್ಲಿ ಮಿನಿವಿಧಾನಸೌಧ ಇದ್ದರೂ ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿಗಳನ್ನು ತರಲು ಸಾಧ್ಯವಾಗಿಲ್ಲ. ಅಪರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಕಚೇರಿ, ಕೃಷಿ ಇಲಾಖೆ ಉಪನಿರ್ದೇಕರ ಕಚೇರಿ, ಮೀನುಗಾರಿಕೆ ಇಲಾಖೆ ಮೊದಲಾದ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸುತ್ತಿವೆ.

ಸರ್ಕಾರ ಇದಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆ ಪಾವತಿಸುತ್ತಿದೆ. ಅದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು ತ್ವರಿತವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಹಳೆ ಕಟ್ಟಡದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು’ ಎಂದು ಚಿಕ್ಕೋಡಿಯ ಚಂದ್ರಕಾಂತ ಹುಕ್ಕೇರಿ ಆಗ್ರಹಿಸುತ್ತಾರೆ.

* * 

ಶಿಥಿಲ ಗೊಂಡಿರುವ ಉಪವಿಭಾಗಾಧಿಕಾರಿಗಳ ಕಚೇರಿಯ ಕಟ್ಟಡವನ್ನು ತೆರವು ಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು
ಚಂದ್ರಕಾಂತ ಹುಕ್ಕೇರಿ
ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.