ADVERTISEMENT

ಕಾಂಗ್ರೆಸ್‌ನಿಂದ ಒಡೆದು ಆಳುವ ನೀತಿ

ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಸದ ಸುರೇಶ ಅಂಗಡಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 5:53 IST
Last Updated 7 ಏಪ್ರಿಲ್ 2018, 5:53 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು   

ಬೆಳಗಾವಿ: ಈಸ್ಟ್‌ ಇಂಡಿಯಾ ಕಂಪನಿ ರೀತಿಯಲ್ಲಿ ಕಾಂಗ್ರೆಸ್‌ ಒಡೆದಾಳುವ ನೀತಿ ಅನುಸರಿಸುತ್ತಿದ್ದರೆ, ಬಿಜೆಪಿ ದೇಶದ ಅಖಂಡತೆಗಾಗಿ ಶ್ರಮಿಸುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಬಿಜೆಪಿ ಮಹಾನಗರ ಜಿಲ್ಲಾ ಘಟಕದ ವೈದ್ಯಕೀಯ ಪ್ರಕೋಷ್ಠವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ದೇಶ ಸ್ವಾತಂತ್ರ್ಯಗೊಂಡ ನಂತರ ಮೊದಲ ಪ್ರಧಾನಿಯಾದ ಕಾಂಗ್ರೆಸ್ಸಿನ ಜವಾಹರಲಾಲ್‌ ನೆಹರು ಅವರು ಕಾಶ್ಮೀರಕ್ಕೆ ಪ್ರತ್ಯೇಕವಾದ ಧ್ವಜ ಹಾಗೂ ಕಾನೂನು ಜಾರಿಗೊಳಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶ್ಯಾಮಪ್ರಸಾದ್‌ ಮುಖರ್ಜಿ, ಭಾರತೀಯ ಜನ ಸಂಘ ಸ್ಥಾಪಿಸಿದರು. ದೇಶದಲ್ಲಿ ಒಂದೇ ರೀತಿಯ ಕಾನೂನು ಇರಬೇಕು ಹಾಗೂ ಒಂದೇ ಧ್ವಜ ಇರಬೇಕೆನ್ನುವುದು ಅವರ ಬಯಕೆಯಾಗಿತ್ತು ಎಂದು ಅಂಗಡಿ ಸ್ಮರಿಸಿದರು.

ADVERTISEMENT

ಕಾಲಾನಂತರ 1980ರ ಏಪ್ರಿಲ್‌ 6ರಂದು ಭಾರತೀಯ ಜನಸಂಘವನ್ನು ಭಾರತೀಯ ಜನತಾ ಪಕ್ಷವಾಗಿ (ಬಿಜೆಪಿ) ಪರಿವರ್ತಿಸಲಾಯಿತು. ಅಟಲ್‌ ಬಿಹಾರಿ ವಾಜಪೇಯಿ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1984ರಲ್ಲಿ ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿ ಇಂದು ಕೇಂದ್ರದಲ್ಲಿ ಸರ್ಕಾರ ರಚಿಸಿದೆ ಎಂದು ಪ್ರಶಂಶಿಸಿದರು.

ರಾಜಕೀಯವೆಂದರೆ ನಾಲ್ಕು ಜನರನ್ನು ಕಟ್ಟಿಕೊಂಡು ಓಡಾಡುವುದಲ್ಲ. ಬಡವರು, ದೀನ ದಲಿತರಿಗೆ  ಸಹಾಯ ಮಾಡುವುದು. ಬಡವರ ಕಣ್ಣೀರು ಒರೆಸುವುದು. ದೇಶದ ಅಖಂಡತೆ ರಕ್ಷಿಸುವುದು ಬಿಜೆಪಿಯ ಸಿದ್ಧಾಂತವಾಗಿದೆ. ಪಕ್ಷದ ಸಿದ್ಧಾಂತವನ್ನು ಯುವಕರು ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಬೇಕು ಎಂದು ಕೋರಿದರು.

ಭತ್ಯೆ ಪಡೆಯಲ್ಲ: ‘ಕಾಂಗ್ರೆಸ್‌ ಜನಪರವಾಗಿಲ್ಲ. ದೇಶದ ಅಭಿವೃದ್ಧಿ ಪರವಾಗಿಲ್ಲ. ದೇಶದ ಸ್ಥಿತಿಗತಿ ಬಗ್ಗೆ ಚರ್ಚಿಸಲು ಸಂಸತ್‌ ಕಲಾಪ ನಡೆಸಲಾಗುತ್ತದೆ. ಆದರೆ, ಈ ಸಲ ಕಾಂಗ್ರೆಸ್‌ ಕಲಾಪ ನಡೆಸಲು ಬಿಡಲಿಲ್ಲ. ಪ್ರತಿದಿನ ಗದ್ದಲ ಎಬ್ಬಿಸಿ, ಕಲಾಪ ನಡೆಯದಂತೆ ನೋಡಿಕೊಂಡಿತು. ಕಲಾಪ ನಡೆಯದೇ ಇರುವುದರಿಂದ ನಾವು ಬಿಜೆಪಿಯ ಸಂಸದರು 23 ದಿನಗಳ ಭತ್ಯೆ ಪಡೆಯದಿರಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯೆ ಉಜ್ವಲಾ ಬಡವನಾಚೆ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದ ಮುಸ್ಲಿಂ ತುಷ್ಟೀಕರಣ ವಿರೋಧಿಸಿ ಶ್ಯಾಮಪ್ರಸಾದ್‌ ಮುಖರ್ಜಿ ಅವರು ಭಾರತೀಯ ಜನಸಂಘ ಸ್ಥಾಪಿಸಿದ್ದರು. ದೇಶದ ಎಲ್ಲ ಜಾತಿ, ಧರ್ಮದವರನ್ನು ಒಂದೇ ಸಮಾನವಾಗಿ ಪರಿಗಣಿಸಿದ್ದರು’ ಎಂದು ನುಡಿದರು.

‘ಇಂದು ಬಿಜೆಪಿ ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ಪಕ್ಷವಾಗಿದೆ. 12 ಕೋಟಿಗಿಂತಲೂ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ. ಪ್ರಸ್ತುತ ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿಯ ಕಮಲ ಅರಳಿದ್ದು, ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಈ ಮೂಲಕ ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗಲಿದೆ’ ಎಂದು ಹೇಳಿದರು.

ಪಕ್ಷದ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ರವಿ ಪಾಟೀಲ, ಮುಖಂಡರಾದ ಗೂಳಪ್ಪ ಹೊಸಮನಿ, ಬಸವರಾಜ ರೊಟ್ಟಿ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.