ADVERTISEMENT

ಕಾಗವಾಡ: ಕಾಗೆಗೆ ‘ಶ್ರೀಮಂತ’ ಪೈಪೋಟಿ

ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜಾರಕಿಹೊಳಿ ಸಹೋದರರು

ಎಂ.ಮಹೇಶ
Published 8 ಮೇ 2018, 8:55 IST
Last Updated 8 ಮೇ 2018, 8:55 IST
ಕಾಗವಾಡ: ಕಾಗೆಗೆ ‘ಶ್ರೀಮಂತ’ ಪೈಪೋಟಿ
ಕಾಗವಾಡ: ಕಾಗೆಗೆ ‘ಶ್ರೀಮಂತ’ ಪೈಪೋಟಿ   

ಬೆಳಗಾವಿ: ಪ್ರಸ್ತುತ ಬಿಜೆಪಿ ಭದ್ರಕೋಟೆಯಾಗಿರುವ ಕಾಗವಾಡ ವಿಧಾನಸಭಾ ಕ್ಷೇತ್ರವನ್ನು ಈ ಬಾರಿಯ ಚುನಾವಣೆಯಲ್ಲಿ ತನ್ನ ವಶ ಮಾಡಿಕೊಳ್ಳಲು ಕಾಂಗ್ರೆಸ್‌ ಪಕ್ಷ ತೀವ್ರ ಕಸರತ್ತು ನಡೆಸುತ್ತಿದೆ.

ಹಾಲಿ ಶಾಸಕ ಭರಮಗೌಡ (ರಾಜು) ಕಾಗೆ ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಶ್ರೀಮಂತ ಪಾಟೀಲ, ಜೆಡಿಎಸ್‌ನಿಂದ ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ ಸೇರಿದಂತೆ 14 ಮಂದಿ ಉಮೇದುವಾರರು ಕಣದಲ್ಲಿದ್ದಾರೆ.

ಮೇಲ್ನೋಟಕ್ಕೆ, ಬಿಜೆಪಿ–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಕಂಡುಬಂದಿದೆ. ಕಾಂಗ್ರೆಸ್‌ ಮುಖಂಡರು, ಸಹೋದರರಾದ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ‘ರಂಗಪ್ರವೇಶ’ ಮಾಡಿರುವುದು ಹಾಗೂ ಪ್ರಚಾರದಲ್ಲಿ ತೊಡಗಿರುವುದು ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ.

ADVERTISEMENT

5ನೇ ಗೆಲುವಿನತ್ತ ಚಿತ್ತ: 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ ಭರಮಗೌಡ ಅವರು, ಕಾಂಗ್ರೆಸ್‌ನ ಪಾಸಗೌಡ ಪಾಟೀಲ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ 2000ದಲ್ಲಿ ನಡೆದ ಉಪಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.

ನಂತರ 2004, 2008 ಹಾಗೂ 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ‘ಹ್ಯಾಟ್ರಿಕ್‌ ಗೆಲುವಿನ’ ಸಾಧನೆಯನ್ನೂ ಮಾಡಿದ್ದಾರೆ. ಇವರಿಗೆ ಇಲ್ಲಿ ಯಾವುದೇ ಬಂಡಾಯದ ಬಿಸಿ ಇಲ್ಲ. ಪಕ್ಕದ ಕ್ಷೇತ್ರವಾದ ಅಥಣಿಯ ಲಕ್ಷ್ಮಣ ಸವದಿ ಕೂಡ ಬೆಂಬಲಕ್ಕೆ ನಿಂತಿದ್ದಾರೆ.

ಕಾಂಗ್ರೆಸ್‌ನಿಂದ ದಿಗ್ವಿಜಯ ಪವಾರ ದೇಸಾಯಿ ಮತ್ತು ಶ್ರೀಮಂತ ಪಾಟೀಲ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ದಿಗ್ವಿಜಯ, 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು.

ಕಾಂಗ್ರೆಸ್‌ ಟಿಕೆಟ್‌ ದೊರೆಯದೆ ಬೇಸರಗೊಂಡಿದ್ದ ಶ್ರೀಮಂತ ಪಾಟೀಲ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಇದರಿಂದ ಮತಗಳು ಹಂಚಿಹೋಗಿದ್ದವು. 2013ರಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸಿದ್ದ ಶ್ರೀಮಂತ, ಈ ಬಾರಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಆ ಪಕ್ಷದ ಉಮೇದುವಾರರೂ ಆಗಿದ್ದಾರೆ.

ಅನುಕೂಲವೋ, ಪ್ರತಿಕೂಲವೋ?: ಕೆಂಪವಾಡ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿರುವ ಅವರು ಒಮ್ಮೆ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ವಿರುದ್ಧ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್‌ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಪಕ್ಷ ಬದಲಾಯಿಸಿರುವ ಬೆಳವಣಿಗೆಯಿಂದ ಅವರಿಗೆ ಯಾವ ರೀತಿಯ ‘ಅನುಕೂಲ’ ಆಗುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

ಸಕ್ಕರೆ ಕಾರ್ಖಾನೆಯಿಂದ ಕೈಗೊಂಡಿರುವ ಸೇವಾ ಕಾರ್ಯಕ್ರಮಗಳು ನೆರವಿಗೆ ಬರಲಿವೆ ಎನ್ನುವ ನಿರೀಕ್ಷೆ ಅವರದು. ಅವರಿಗೆ ಆರಂಭದಲ್ಲಿ ಬಂಡಾಯದ ಬಿಸಿ ಎದುರಾಗಿತ್ತು. ನಂತರ ಎಲ್ಲರವೂ ಸರಿ ಹೋದಂತೆ ಕಂಡರೂ ಅತೃಪ್ತರ ಸಿಟ್ಟು ಕಡಿಮೆಯಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಹಿಂದೆ ಕಾಂಗ್ರೆಸ್‌ನಲ್ಲಿದ್ದ ಕಲ್ಲಪ್ಪ ಮಗೆಣ್ಣವರ ಈ ಬಾರಿ ಜೆಡಿಎಸ್‌ ಉಮೇದುವಾರರಾಗಿದ್ದಾರೆ. ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಜಾರಿಗೊಳಿಸಿದ್ದ ಕಾರ್ಯಕ್ರಮಗಳು ಕೈಹಿಡಿಯಲಿವೆ ಎಂದು ನೆಚ್ಚಿಕೊಂಡಿದ್ದಾರೆ. ಬಿಎಸ್‌ಪಿ ಬೆಂಬಲವೂ ಅವರಿಗಿದೆ.

ಕ್ಷೇತ್ರದ ಬಹುತೇಕ ಸ್ಥಳೀಯ ಸಂಸ್ಥೆಗಳ ಮೇಲೆ ತಮ್ಮ ಹಿಡಿತ ಸಾಧಿಸಿರುವ ಕಾಗೆ, ‘ಈ ಬಾರಿ ಕಾಂಗ್ರೆಸ್‌ ಗೆದ್ದರೆ ಅವರ ಮನೆಯಲ್ಲಿ ಚಾಕರಿ ಮಾಡುತ್ತೇನೆ’ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಇದರಿಂದಾಗಿ, ಈ ಬಾರಿ ಇಲ್ಲಿ ಕಾಗೆ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಸ್ಪರ್ಧೆಯಂತೆಯೇ ಕಂಡುಬರುತ್ತಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ‘ವಲಸೆ ಕಾರ್ಯಕ್ರಮ’ ಜೋರಾಗಿಯೇ ನಡೆಯುತ್ತಿದೆ.

ಮತದಾರರ ವಿವರ

ಪುರುಷರು      92,223

ಮಹಿಳೆಯರು   85,825

ಒಟ್ಟು          1,78,048

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.