ADVERTISEMENT

`ಕಾರ್ಖಾನೆ ಮಾಲೀಕರ ಲಾಬಿಗೆ ಮಣಿದ ಸರ್ಕಾರ'

ಸುರ್ವರ್ಣಸೌಧ ಮುಂದೆ ಜೆಡಿಎಸ್ ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:40 IST
Last Updated 4 ಡಿಸೆಂಬರ್ 2012, 8:40 IST

ಗೋಕಾಕ: ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಸಂಬಂಧ ಎಸ್‌ಎಪಿ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು ಇದೇ ದಿ. 5ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ  ಹಮ್ಮಿಕೊಳ್ಳಲು ಉದ್ದೇಶಿಸಿರುವ ಧರಣಿ ಸತ್ಯಾಗ್ರಹವನ್ನು ಜೆಡಿಎಸ್ ಜಿಲ್ಲಾ ಘಟಕ ಬೆಂಬಲಿಸಲಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಪೂಜೇರಿ ಹೇಳಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ವಿವಿಧ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಎಸ್‌ಎಪಿ ಕಾನೂನು ಅನ್ನು ರಾಜ್ಯದಲ್ಲೂ ಜಾರಿಗೆ ತಂದರೆ ರೈತರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸಕ್ಕರೆ ಲಾಬಿಗೆ ಒಳಗಾಗಿ ಎಸ್‌ಎಪಿ ಜಾರಿಗೆ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ಬಹುತೇಕ ಸಚಿವರು ಹಾಗೂ ಶಾಸಕರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವುದರಿಂದ ತಮ್ಮ ಕಾರ್ಖಾನೆಗಳ ಲಾಭದ ದೃಷ್ಟಿಯಿಂದ ಎಸ್‌ಎಪಿ ಕಾನೂನು ಜಾರಿಗೆ ಮುಂದಾಗುತ್ತಿಲ್ಲವೆಂದು ನೇರವಾಗಿ ಆರೋಪಿಸಿದರು.

ಎಸ್‌ಎಪಿ ಕಾನೂನು ಜಾರಿಗೆ ತರುವ ಸಂಬಂಧ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಜೆಡಿಎಸ್ ಸದನದ ಗಮನ ಸೆಳೆಯಲಿದ್ದು, ಈ ಕುರಿತು ಅಧಿವೇಶನದಲ್ಲಿ ಚರ್ಚಿಸಲು ಅನುಮತಿ ನೀಡುವಂತೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಸಭಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಎಸ್‌ಎಪಿ ಕಾನೂನು ಜಾರಿಗೊಳಿಸಬೇಕು.ಇಲ್ಲದಿದ್ದರೆ ಆ ಕಾನೂನಿನ ಅನುಷ್ಠಾನಕ್ಕಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಒಂದು ತಿಂಗಳೊಳಗೆ ಎಸ್‌ಎಪಿ ಕಾನೂನು ಜಾರಿಗೊಳಿಸಲಿದೆ ಎಂದು ಹೇಳಿದರು.

ಸಚಿವ ಬಾಲಚಂದ್ರ ಪಕ್ಷ ನಿಷ್ಠೆ  ಯಾವುದಕ್ಕೆ?: ಗೋಕಾಕ ಮತಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಪರ ಚುನಾವಣಾ ಬ್ಯಾಟಿಂಗ್‌ನಲ್ಲಿ ಬೆಂಬಲಿಸುವುದಾಗಿ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಕನಕದಾಸ ಜಯಂತಿ ದಿನದಂದು ನೀಡಿರುವ ಹೇಳಿಕೆಗೆ  ಸಚಿವರ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವಂತಾಗಿದೆ. ಸರ್ಕಾರದ ಸಚಿವರಾಗಿರುವ ಬಾಲಚಂದ್ರ ಅವರು ಪಕ್ಷ ನಿಷ್ಠೆ ಬದಲು ವೈಯಕ್ತಿಕ ರಾಜಕಾರಣದ ಮಾತುಗಳನ್ನಾಡಿರುವುದು ಈ ನಾಡಿನ ದುರ್ದೈವದ ಸಂಗತಿ ಎಂದರು.

ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳನ್ನು ಮೋಸಗೊಳಿಸುವ ಯತ್ನ ಇದಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದ ಅಶೋಕ ಪೂಜಾರಿ ಅವರು, ತಮ್ಮ ಪ್ರಭಾವ ಹಾಗೂ ವೈಯಕ್ತಿಕ ರಾಜಕೀಯಕ್ಕಾಗಿ ಶ್ರೇಷ್ಠ ಸಂತರ ಜಯಂತಿಯ ಕಾರ್ಯಕ್ರಮವನ್ನು ಪಕ್ಷದ ವೇದಿಕೆಯಂತೆ ಬಳಸಿಕೊಂಡಿರುವುದು ಅತಿ ದುರದೃಷ್ಟಕರ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಲ್.ಬಿ. ಹುಳ್ಳೇರ, ಪ್ರಕಾಶ ಸೋನವಾಲ್ಕರ ಉಪಸ್ಥಿತರಿದ್ದರು.

`ಕಬ್ಬಿಗೆ ಸೂಕ್ತ ಬೆಲೆ'
ಗೋಕಾಕ:
ತಾಲ್ಲೂಕಿನ ಹಿರೇನಂದಿ ಗ್ರಾಮದ ಬಳಿ ನೂತನವಾಗಿ ಆರಂಭಿಸಿ ರುವ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾ ನೆಗೆ ಪ್ರಸಕ್ತ ಕಬ್ಬು ನುರಿಸುವ ಹಂಗಾ ಮಿನಲ್ಲಿ ಕಬ್ಬು ಪೂರೈಸುವ ರೈತರ ಕಬ್ಬಿನ ಅಲ್ಪಾವಧಿ ತಳಿಗಳಿಗೆ 2500 ರೂ, ಹಾಗೂ ಇತರೆ ತಳಿಗಳಿಗೆ 2400 ರೂ. ಗಳನ್ನು ಪ್ರತಿ ಟನ್‌ಗೆ ದರವನ್ನು ನಿಗದಿಗೊಳಿಸಲಾಗಿದೆ ಎಂದು ಕಾರ್ಖಾನೆ ಚೇರಮನ್ ಹಾಗೂ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾಲೂಕಿನ ರೈತರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ಇಲ್ಲಿಯವರೆಗೆ ರೈತರು ಕಬ್ಬು ಪೂರೈಸುವ ಮೂಲಕ ಕಾರ್ಖಾನೆ ಪ್ರಗತಿಗೆ ಸಹಕರಿಸಿದ್ದಾರೆ ಎಂದು ಶಾಸಕರು ತಿಳಿಸಿದರು. 

ಕಾರ್ಖಾನೆಗೆ ಆರಂಭದಿಂದ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರ ಕಬ್ಬಿನ ಬಿಲ್ಲಿನ ವ್ಯತ್ಯಾಸ     ಕೂಡ ಈ ದರಕ್ಕೆ ಅನ್ವಯವಾಗುತ್ತದೆ. ಕಬ್ಬು ಪೂರೈಸಿ ಕಾರ್ಖಾನೆ ಪ್ರಗತಿಗೆ ಸಹಕರಿಸುವಂತೆ ರಮೇಶ ಜಾರಕಿಹೊಳಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.