ADVERTISEMENT

ಕೆಎಲ್‌ಇ ಆಸ್ಪತ್ರೆ-ಮಲೇಶಿಯಾ ವಿವಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 8:00 IST
Last Updated 20 ಫೆಬ್ರುವರಿ 2012, 8:00 IST

ಬೆಳಗಾವಿ: ಆರೋಗ್ಯ ಸೇವೆಗಾಗಿ ಪಾಶ್ಚಿಮಾತ್ಯ ಖಂಡಗಳನ್ನು ಅವಲಂಬಿಸದೇ ಏಷ್ಯಾದಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ ಮಲೇಶಿಯನ್ ಸೇನ್ಸ್ ವಿಶ್ವವಿದ್ಯಾಲಯವು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯೊಂದಿಗೆ ಕೈಜೋಡಿಸಲು ನಿರ್ಧರಿಸಿದೆ.

ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಭಾನುವಾರ ತಮ್ಮ ತಂಡ ದೊಂದಿಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಕೈಗೊಂಡಿರುವ ಕ್ಲಿನಿಕಲ್ ಸಂಶೋಧನೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಮಲೇಶಿಯನ್ ಸೇನ್ಸ್ ವಿಶ್ವವಿದ್ಯಾಲಯವು ಉಪ ಕುಲಪತಿ ಪ್ರೊ.ಆಸ್ಮಾ ಇಸ್ಮಾಯಿಲ್, “ವೈದ್ಯ ವಿಜ್ಞಾನ ಸಂಶೋಧನೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕಾರ್ಯರೂಪಕ್ಕೆ ತಂದು ಸಮಾಜದ ಆರೋಗ್ಯ ಗುಣಮಟ್ಟ ಸುಧಾರಿಸಲು ಯತ್ನಿಸಬೇಕು” ಎಂದು ಹೇಳಿದರು.

“ಡಾ. ಪ್ರಭಾಕರ ಕೋರೆ ಆಸ್ಪತ್ರೆಯೊಂದಿಗೆ ಆರೋಗ್ಯ ಶಿಕ್ಷಣ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಮಲೇಶಿಯಾ ಜನರ ಆರೋಗ್ಯ ಸುಧಾರಿಸಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ವಿವಿಧ ರೋಗಗಳನ್ನು ತಡೆಗಟ್ಟಲು ಸಂಶೋಧನೆ ನಡೆಸಬೇಕಾಗಿದೆ. ಹೀಗಾಗಿ ಸಂಶೋಧನೆಗೆ ಸಹಾಯ ಪಡೆಯಲಾಗುವುದು” ಎಂದು ತಿಳಿಸಿದರು.

“ಮಧುಮೇಹ, ಸಾಂಕ್ರಾಮಿಕ ರೋಗಗಳು, ಸೋಂಕು ಹರಡುವಿಕೆ, ಪಿತ್ತಕೋಶ ಕ್ಯಾನ್ಸರ್, ವಂಶವಾಹಿನಿ ರೋಗಗಳು, ಮಕ್ಕಳ ರೋಗಗಳನ್ನು ತಡೆಗಟ್ಟಲು ಸಂಶೋಧನೆಯ ಸಹಾಯವನ್ನು ಪಡೆಯಲಾಗುತ್ತದೆ” ಎಂದು ಪ್ರೊ. ಆಸ್ಮಾ ಹೇಳಿದರು.


ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, “ಈಗಾಗಲೇ ಮಲೇಶಿಯಾ ವಿದ್ಯಾರ್ಥಿಗಳಿಗೆ ವೈದ್ಯ ವಿಜ್ಞಾನ ಶಿಕ್ಷಣ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅಲ್ಲಿನ ಜನರ ಆರೋಗ್ಯವನ್ನು ಸುಧಾರಿಸಲು ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.

ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಕ್ಲಿನಿಕಲ್ ಟ್ರೈಲ್ ಮತ್ತು ಸಂಶೋಧನೆಯಲ್ಲಿರುವ ಅವಕಾಶಗಳ ಕುರಿತು ಮಲೇಶಿಯಾ ತಂಡಕ್ಕೆ ಮಾಹಿತಿ ನೀಡಿದರು.

ಕ್ಲಿನಿಕಲ್ ಸೈನ್ಸ್ ರೀಸರ್ಚ್‌ನ ಡೀನ್ ಪ್ರೊ. ನೂರ್ ಹಯಾತಿ ಒಥಮ್ಯೋನ್, ಜೈವಿಕ ಔಷಧ ಹಾಗೂ ಆರೋಗ್ಯ ಸಂಶೋಧನಾ ಡೀನ್ ಮುಸ್ತಾಫಾ ಮುಸಾ, ಡೆಪ್ಯುಟಿ ಡೀನ್ ಓಥಮ್ಯೋನ್ ಸುಲೈಮಾನ್, ಡೆಪ್ಯುಟಿ ಡೈರೆಕ್ಟರ್ ಫುವಾ ಕೈ ಕೇನ್, ಡಾ. ಅಜೀಜ್ ಇಸ್ಮಾಯಿಲ್ ಹಾಗೂ ಸಲ್ಮೈ ಪುಟಿಹಾ ಮಲೇಶಿಯಾ ವಿವಿ ತಂಡದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT