ADVERTISEMENT

ಕೋರ್ಸ್‌ಗೆ ಎಐಸಿಟಿಇ ಅನುಮೋದನೆ

ಚಿಕ್ಕೋಡಿ ಜಿಟಿಟಿಸಿ ಪ್ರಾಚಾರ್ಯ ಮೊಗೇರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಮೇ 2018, 7:08 IST
Last Updated 7 ಮೇ 2018, 7:08 IST

ಚಿಕ್ಕೋಡಿ: ಪಟ್ಟಣದಲ್ಲಿ ಆರಂಭಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅನುಮೋದನೆ ದೊರೆತಿದೆ ಎಂದು ಪ್ರಾಂಶು ಪಾಲ ಬಿ.ಜಿ.ಮೊಗೇರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಸಂಸ್ಥೆಯಲ್ಲಿರುವ ಡಿಪ್ಲೊಮಾ ಇನ್ ಟೂಲ್ ಆ್ಯಂಡ್‌ ಡೈ ಮೇಕಿಂಗ್
ಕೋರ್ಸ್‌ 3+1 ವರ್ಷ ಅವಧಿಯದ್ದಾಗಿದ್ದು, ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಡಿಪ್ಲೋಮಾ ಇನ್ ಮೆಕೆಟ್ರೋನಿಕ್ಸ್ ಕೋರ್ಸ್‌ 3+1 ವರ್ಷ ಮತ್ತು ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್‌ 3+1 ವರ್ಷ ಅವಧಿಯದ್ದಾಗಿದೆ. ಇದು ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಉತ್ತಮವಾದ ಆಯ್ಕೆಯಾಗಿದ್ದು, ಪ್ರತಿ ಡಿಪ್ಲೋಮಾ ಕೋರ್ಸ್‌ಗಳಿಗೆ 60 ಸೀಟುಗಳಂತೆ ಪ್ರತಿ ವರ್ಷ 180 ವಿದ್ಯಾರ್ಥಿಗಳಿಗೆ ಮೆರಿಟ್- ಕಂ- ರೋಸ್ಟರ್ ಪದ್ಧತಿ ಮೂಲಕ ಆಯ್ಕೆ ಮಾಡಲಾಗುವದು. ಪ್ರವೇಶಕ್ಕೆ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 5 ವರ್ಷ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಶೇ 30ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಕಾಯ್ದಿರಿಸಿದ್ದು, ಶೀಘ್ರವೇ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಈ ಸಂಸ್ಥೆಯಲ್ಲಿ ಡಿಪ್ಲೋಮಾ ಉತ್ತೀರ್ಣರಾದಂಥ ವಿದ್ಯಾರ್ಥಿಗಳಿಗೆ ಶೇ 100ರಷ್ಟು ಉದ್ಯೋಗವಕಾಶವಿದ್ದು, ಉನ್ನತ ಹುದ್ದೆಗಳನ್ನು ಹೊಂದಿ ದೇಶ–ವಿದೇಶಗಳಲ್ಲಿ ಕಾರ್ಯನಿರ್ವಹಿಸಬಹುದಾಗಿದೆ ಮತ್ತು ಉನ್ನತ ಶಿಕ್ಷಣ ಪಡೆಯಬಹುದಾಗಿದೆ. 3 ವರ್ಷದ ಡಿಪ್ಲೋಮಾ ಕೋರ್ಸ್‌ ಉತ್ತೀರ್ಣರಾದ ನಂತರ 15–20 ಪ್ರತಿಷ್ಟಿತ ಕಂಪನಿಗಳು ಕ್ಯಾಂಪಸ್ ಸಂದರ್ಶನ ಮೂಲಕ ವಿದ್ಯಾರ್ಥಿಗಳನ್ನು ಟ್ರೇನಿ ಆಗಿ ಆಯ್ಕೆ ಮಾಡಿಕೊಳ್ಳುತ್ತವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರತಿ ತಿಂಗಳು ₹ 10 ಸಾವಿರದಿಂದ ₹ 15 ಸಾವಿರವರೆಗೆ ಸಂಬಳ ಪಡೆಯಬಹುದಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

‘ಕೌಶಲ ಕರ್ನಾಟಕ ಯೋಜನೆ ಅಡಿಯಲ್ಲಿ ಬಡ ನಿರುದ್ಯೋಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಯುವಕ ಯುವತಿಯರಿಗೆ ಸುಮಾರು 84 ಫಲಾನುಭವಿಗಳಿಗೆ ವಿವಿಧ ತಾಂತ್ರಿಕ ಕೌಶಲ್ಯ ತರಬೇತಿ ನೀಡಲಾಗಿದೆ ಮತ್ತು ಈ ತರಬೇತಿ ಪಡೆದ ಫಲಾನುಭವಿಗಳಿಗೆ ಶಿಷ್ಯವೇತನವನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಮೋ: 91416 30309, 99728 51277 ಸಂಪರ್ಕಿಸಬಹುದು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.