ಹುಕ್ಕೇರಿ: ಪಟ್ಟಣದಲ್ಲಿ ಮಂಗಳವಾರದಿಂದ ಪ್ರಾರಂಭಗೊಂಡ ಐದು ದಿನಗಳ ಲಕ್ಷ್ಮೆದೇವಿ ಜಾತ್ರೆಯ ಪ್ರಯುಕ್ತ ಗುರುವಾರ ಬಸ್ತವಾಡ ಗಲ್ಲಿಯಲ್ಲಿ ವಾಸ್ತವ್ಯ ಮಾಡಿದ್ದ ದೇವಿಯನ್ನು ಮಧ್ಯಾಹ್ನದ ನಂತರ ಪಟ್ಟಣದ ಬಜಾರ್ ರಸ್ತೆಯ ಮೂಲಕ ಮತ್ತು ಶುಕ್ರವಾರ ತುರಮಂದಿಯಲ್ಲಿ ವಾಸ್ತವ್ಯ ಮಾಡಿದ್ದ ದೇವಿಯನ್ನು ಡಾ.ಉದಯ ಕುಲಕರ್ಣಿ ಮನೆಯವರೆಗೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಕರೆದೊಯ್ಯವ ಮೂಲಕ ಮೂರು ಮತ್ತು ನಾಲ್ಕನೆ ದಿನದ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದರು.
ಬಸ್ತವಾಡಗಲ್ಲಿ ಮತ್ತು ತುರಮಂದಿಯಲ್ಲಿ ಬೆಳಿಗ್ಗೆಯಿಂದ ಮಹಿಳೆಯರು ಭಕ್ತಿಭಾವದಿಂದ ದೇವಿಗೆ ಉಡಿ ತುಂಬಿ ಸಿಹಿ ನೈವೇದ್ಯ ಅರ್ಪಿಸಿದರು. ಗುರುವಾರ ಮಧ್ಯಾಹ್ನದ ನಂತರ ವಿವಿಧ ವಾದ್ಯಮೇಳದೊಂದಿಗೆ ಪ್ರಾರಂಭಗೊಂಡ ರಥದ ಮೆರವಣಿಗೆಯು ಬಜಾರ್ ರಸ್ತೆ ಬಳಸಿಕೊಂಡು ಸಾರ್ವಜನಿಕ ಗ್ರಂಥಾಲಯದ ರಸ್ತೆಯ ಮೂಲಕ ಹಾಯ್ದು ತುರಮಂದಿಯವರೆಗೆ ಸಂಚರಿಸಿತು. ಶುಕ್ರವಾರ ಮಧ್ಯಾಹ್ನದ ನಂತರ ತುರಮಂದಿಯಿಂದ ಡಾ. ಉದಯ ಕುಲಕರ್ಣಿ ಅವರ ಮನೆಯವರೆಗೆ ಸಂಚಿರಿಸಿತು.
ಉರುಳು ಸೇವೆ: ಹರಕೆ ಹೊತ್ತ ಮಹಿಳೆಯರು ಮತ್ತು ಮಕ್ಕಳು ಶುಕ್ರವಾರ ಮುಂಜಾನೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉರುಳು ಸೇವೆ ಮಾಡುತ್ತಾ ದೇವಿ ಗುಡಿಗೆ ಬಂದು ನೈವೇದ್ಯ ಅರ್ಪಿಸಿದ್ದು ವಿಶೇಷವಾಗಿತ್ತು.
ರಸ್ತೆಯುದ್ದಕ್ಕೂ ಮಹಿಳೆಯರು ತಮ್ಮ ಮನೆಯ ಮುಂದೆ ಬಂದ ದೇವಿಗೆ ತುಂಬಿದ ಕೊಡದಲ್ಲಿನ ನೀರು ಹಾಕಿ, ಆರತಿ ಬೆಳಗಿ, ನೈವೇದ್ಯ ಹಿಡಿದರು. ರಥದ ಹಗ್ಗೆ ಎಳೆಯುವ ಯುವಕರು ಜಯಘೋಷ ಹಾಕುತ್ತಾ ಉತ್ಸುಕತೆಯಿಂದ ರಥ ಎಳೆಯುವದು ಆಕರ್ಷಣೀಯ ವಾಗಿತ್ತು. ರಥ ಚಲಿಸುವಾಗ ರಸ್ತೆಯ ಅಕ್ಕಪಕ್ಕ ಮಹಿಳೆಯರು ರಥೋತ್ಸವದ ಸಡಗರ ನೋಡಿ ಸಂತಸ ಪಟ್ಟರು.
ರಥ ಚಲಿಸುವಾಗ ಭಕ್ತರು ಖಾರಿಕ್, ಬಾಳೆಹಣ್ಣು, ನಾಣ್ಯ ಎಸೆದು ತಮ್ಮ ಭಕ್ತಿ ಅರ್ಪಿಸಿದರು.
ನೃತ್ಯ: ವಿವಿಧ ವಾದ್ಯಗಳಿಗೆ ಯುವಕರು ತಾಳ ಹಾಕುತ್ತಾ ಕೇಕೆ-ಶಿಳ್ಳೆ ಹೊಡೆಯುತ್ತ ನೃತ್ಯಮಾಡಿ ಸಂಭ್ರಮ ಪಟ್ಟರು.
ತೆರೆ: ಶನಿವಾರ ಮುಂಜಾನೆ ದೇವಿಯ ರಥೋತ್ಸವ ಡಾ.ಕುಲಕರ್ಣಿ ಮನೆಯಿಂದ ಹೊರಟು ಬಾಯ್‌ಪಾಸ್ ರಸ್ತೆಯಲ್ಲಿನ ಲಕ್ಷ್ಮೆಗುಡಿಗೆ ತೆರಳುತ್ತದೆ. ಗುಡಿಯ ಮುಂದೆ ರಂಗ ಹೊಯ್ದಿರುತ್ತಾರೆ. ಸಾಂಕೇತಿಕವಾಗಿ ದೇವಿಗೆ ಕೋಣದ ಬಲೆಕೊಡಲಾಗುವುದು. ರಾತ್ರಿಯಾದ ನಂತರ ಸಿಮೋಲ್ಲಂಘನ ಮಾಡುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.
ಭದ್ರತೆ: ಮುಂಜಾಗ್ರತಾ ಕ್ರಮವಾಗಿ ಆಯಾ ಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.