ADVERTISEMENT

ಗುಟ್ಕಾ ನಾಶಪಡಿಸಿದ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 9:24 IST
Last Updated 6 ಜೂನ್ 2013, 9:24 IST

ಬೆಳಗಾವಿ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿದ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಇಲ್ಲಿನ ಕಚೇರಿ ರಸ್ತೆಯ ಪಾನ್- ಬೀಡಿ ಅಂಗಡಿಗಳ ಮೇಲೆ ಬುಧವಾರ ದಾಳಿ ನಡೆಸಿ ಗುಟ್ಕಾ ಚೀಟಿಗಳನ್ನು ನಾಶಪಡಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ದಿಲೀಪಕುಮಾರ ಮುನೋಳಿ ನೇತೃತ್ವದ ಅಧಿಕಾರಿಗಳ ತಂಡ ಕಚೇರಿ ರಸ್ತೆಯ ಆರು ಪಾನ್- ಬೀಡಿ ಅಂಗಡಿಗಳ ಮೇಲೆ ದಾಳಿ ನಡೆಸಿತು. ಗುಟ್ಕಾ ಚೀಟಿಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ಅವುಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು. ಗುಟ್ಕಾ ಮಾರಾಟ ನಿಷೇಧಿಸಲಾಗಿದ್ದು, ಅವುಗಳನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುವುದು ಅಪರಾಧ. ಆದ್ದರಿಂದ ಎಲ್ಲ ಗುಟ್ಕಾ ಚೀಟಿಗಳನ್ನು ನಾಶಪಡಿಸಬೇಕು ಎಂದು ಅಧಿಕಾರಿಗಳು ಅಂಗಡಿಕಾರರಿಗೆ ಸೂಚಿಸಿದರು.

`ಗುಟ್ಕಾ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಗುಟ್ಕಾ ಮಾರಾಟ ನಿಷೇಧಿಸಿರುವ ಬಗ್ಗೆ ಅಂಗಡಿಕಾರರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಗುಟ್ಕಾ ಮಾರಾಟ ಬಂದ್ ಮಾಡುವಂತೆ ಅಂಗಡಿಕಾರರಿಗೆ ದಾಳಿ ಮೂಲಕ ಸೂಚಿಸಲಾಗಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಗುಟ್ಕಾ ನಿಷೇಧಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು' ಎಂದು ದಿಲೀಪಕುಮಾರ ಮುನೋಳಿ ಕೋರಿದರು.

`ಜಿಲ್ಲೆಯಲ್ಲಿ ಚಿಕೂನ್ ಗುನ್ಯಾ ಹಾಗೂ ಡೆಂಗೆ ಜ್ವರದ ಶಂಕಿತ 165 ಪ್ರಕರಣಗಳು ದಾಖಲಾಗಿವೆ. ಡೆಂಗೆ ಜ್ವರದ 32 ಪ್ರಕರಣಗಳು ದೃಢಪಟ್ಟಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜನರಿಗೆ ಮನವಿ ಮಾಡಲಾಗಿದೆ ಮುನೋಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.