ಚಿಕ್ಕೋಡಿ: ಮನೆಮಗಳು ಗರ್ಭವತಿಯಾದಾಗ ಸಡಗರದಿಂದ ಸೀಮಂತ ಕಾರ್ಯ ಮಾಡಿ ಹರಸುವುದು ಸಾಮಾನ್ಯ. ಆದರೆ, ಇಲ್ಲಿನ ರೈತ ಕುಟುಂಬವೊಂದು ಮುದ್ದಿನಿಂದ ಸಾಕಿದ ಲಕ್ಷ್ಮೀ ಹೆಸರಿನ ಹಸು ಗರ್ಭ ಧರಿಸಿದ ಪ್ರಯುಕ್ತ ಉಡಿ ತುಂಬಿ ಸಂಭೃಮಿಸಿದ ಅಪರೂಪದ ಘಟನೆ ಭಾನುವಾರ ನಡೆಯಿತು.
ಪಟ್ಟಣದ ಬಿ.ಕೆ.ಕಾಲೇಜು ಹಿಂಬದಿಯ ತೋಟ ವೊಂದರಲ್ಲಿ ವಾಸಿಸುವ ಮಹಾದೇವಿ ಬಸಪ್ಪ ಪೂಜಾರಿ ಎಂಬುವವರ ರೈತ ಕುಟುಂಬದಲ್ಲಿ ಭಾನುವಾರ ಹಬ್ಬದ ವಾತಾವರಣವೇ ನೆಲೆಸಿತ್ತು. ಮನೆಯಂಗಳದ ತುಂಬ ರಂಗೋಲಿಯ ಚಿತ್ತಾರ ಮತ್ತು ತಳಿರು ತೋರಣಗಳು ರಾರಾಜಿಸುತ್ತಿದ್ದವು. ಪ್ರೀತಿಯಿಂದ ಸಾಕಿದ ಲಕ್ಷ್ಮೀಯ ಸೀಮಂತ ಕಾರ್ಯಕ್ಕೆ ನೆರೆಹೊರೆಯವರನ್ನು ಹಾಗೂ ಬಂಧು ಬಾಂಧವರನ್ನೂ ಆಮಂತ್ರಿಸಲಾಗಿತ್ತು. ಮಕ್ಕಳು ಮರಿ ಸೇರಿದಂತೆ ಎಲ್ಲರೂ ಹೊಸ ಬಟ್ಟೆಗಳನ್ನು ತೊಟ್ಟು ನಲಿದಾಡುತ್ತಿದ್ದರು.
ಮುತ್ತೈದೆಯರು ಲಕ್ಷ್ಮೀಗೆ ಹಸಿರು ಬಳೆ, ಸೀರೆ, ಕುಪ್ಪುಸ, ಕುಂಕುಮ ಅರ್ಪಿಸಿದರು. ಉಡಿ ತುಂಬಿ ಅಕ್ಕರೆಯಿಂದ ಆರತಿ ಎತ್ತಿ ಹರಿಸಿದರು. ಆಗಮಿಸಿದವರಿಗೆಲ್ಲಾ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಭಾರತೀಯ ಸಂಪ್ರದಾಯದಲ್ಲಿ ಗೋಮಾತೆಗೆ ವಿಶಿಷ್ಠ ಸ್ಥಾನವಿದ್ದು, 33 ಕೋಟಿ ದೇವರುಗಳು ಆ ಹಸುವಿನಲ್ಲಿ ನೆಲೆಸಿರುತ್ತವೆ ಎಂಬ ನಂಬಿಕೆಯಿದೆ. ತಾವು ಸಾಕಿರುವ ಲಕ್ಷ್ಮಿಗೆ ಸೀಮಂತ ಕಾರ್ಯ ಮಾಡುತ್ತಿದ್ದೇವೆ ಎಂದು ಮಹಾದೇವಿ ಪೂಜಾರಿ ಹೇಳಿದರು.
ಆಧುನಿಕ ಜಗತ್ತಿನಲ್ಲಿ ಮಾನವೀಯ ಸಂಬಂಧಗಳ ಕೊಂಡಿಯೇ ಕಳಚುತ್ತಿರುವಾಗ ಈ ರೈತ ಕುಟುಂಬ ಪ್ರೀತಿಯಿಂದ ಪಾಲನೆ ಪೋಷಣೆ ಮಾಡಿದ ಹಸುವಿಗೆ ಸೀಮಂತ ಕಾರ್ಯ ಮಾಡಿರುವುದು ಅಪರೂಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.