ADVERTISEMENT

ಗೌರವಧನ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 9:30 IST
Last Updated 22 ಸೆಪ್ಟೆಂಬರ್ 2011, 9:30 IST

ರಾಮದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರ 2011ರ ಏಪ್ರಿಲ್‌ನಿಂದ ಹೆಚ್ಚಿಸಿದ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ಸಿಡಿಪಿಓ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇಲ್ಲಿನ ವೆಂಕಟೇಶ್ವರ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತೆಯರು, ನಿರಂತರ ಹೋರಾಟದ ಫಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಳ ಮಾಡಿರುವ ಗೌರವಧನವನ್ನು ಎಲ್ಲ ಅಂಗನವಾಡಿ ನೌಕರರಿಗೆ ವಿತರಣೆ ಮಾಡಬೇಕೆಂದು ಆಗ್ರಹಿಸಿದರು.

ಅಂಗನವಾಡಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಆದರೂ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಚುಚ್ಚುಮದ್ದು ಹಾಕುವ ಕೆಲಸವಾಗಲಿ, ಭಾಗ್ಯಲಕ್ಷ್ಮಿ ಯೋಜನೆಯ ಕೆಲಸವಾಗಲಿ ಅಂಗನವಾಡಿ ನೌಕರರು ನಿಭಾಯಿಸುತ್ತಿದ್ದಾರೆ.

ಆದರೆ ಕೆಲಸ ಮಾಡಿದ್ದರ ಕುರಿತು ಅವರಿಗೆ ಯಾವುದೇ ಹೆಚ್ಚುವರಿ ವೇತನ ಕೊಡದೇ ಇರುವುದು ವಿಷಾದಕರ ಸಂಗತಿ. ಹೆಚ್ಚುವರಿ ವೇತನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.
ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಸ್ಥಳೀಯ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಸಿಡಿಪಿಓ ಮಂಜುನಾಥ ಅವರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ತಾಲ್ಲೂಕು ಘಟಕದ ಗೌರವಾಧ್ಯಕ್ಷ ಗೈಬು ಜೈನೆಖಾನ್, ವಿ.ಪಿ. ಕುಲಕರ್ಣಿ, ಸಂಘದ ಅಧ್ಯಕ್ಷೆ ಪ್ರೇಮಾ ಕಿಲ್ಲೇದಾರ, ಮಂಜುಳಾ ಹಿರೇಮಠ, ಯಶೋದಾ ಹೊಸಕೋಟಿ, ಜಯಶ್ರೀ ನಿಂಗರಡ್ಡಿ, ಮಹಾದೇವಿ ನಂದಿ, ಶೋಭಾ ಪಾಟೀಲ, ಮಂಜುಳಾ ಮರಡಿಮಠ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸರಸ್ವತಿ ಮಾಳಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.