ADVERTISEMENT

ಚನ್ನಮ್ಮಾಜಿ ವೀರಜ್ಯೋತಿ ಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:35 IST
Last Updated 11 ಅಕ್ಟೋಬರ್ 2011, 8:35 IST

ಬೈಲಹೊಂಗಲ: ಕಿತ್ತೂರು ಉತ್ಸವವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿ ಆಚರಿಸಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ, ಮೈಸೂರ ಮಿನರಲ್ಸ್ ಲಿ. ಅಧ್ಯಕ್ಷ ಜಗದೀಶ ಮೆಟಗುಡ್ಡ ಹೇಳಿದರು.

ಕಿತ್ತೂರು ಉತ್ಸವದ ಅಂಗವಾಗಿ ಚೆನ್ನಮ್ಮಾಜಿ ವೀರಜ್ಯೋತಿ ಯಾತ್ರೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕಾರ್ಯಕ್ರಮ ಸಂಯೋಜನೆ ಹಾಗೂ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಉತ್ಸವದ ಯಶಸ್ವಿಗೆ ಕಾಳಜಿ ವಹಿಸಲಾಗಿದೆ ಎಂದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಚೆನ್ನಮ್ಮಾ ಸಮಾಧಿ, ದ್ವಿಮುಖ ರಸ್ತೆ ಅಭಿವೃದ್ಧಿ, ಅಮಟೂರಿನ ಬಾಳಪ್ಪ ಹಾಗೂ ಸಂಗೊಳ್ಳಿಯ ರಾಯಣ್ಣನ ಉದ್ಯಾನ, ಸ್ಮಾರಕಗಳ ಅಭಿವೃದ್ಧಿಗೆ ಯೋಜನೆ ತಯಾರಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದ  ಅವರು, ಬೆಳವಡಿ ಮಲ್ಲಮ್ಮನ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಚೆನ್ನಮ್ಮನ ಕಿತ್ತೂರು ಶಾಸಕ ಸುರೇಶ ಮಾರಿಹಾಳ, ಜಿಲ್ಲೆಗೆ ಸೀಮಿತವಾಗಿದ್ದ ಜ್ಯೋತಿ ಯಾತ್ರೆ ಕಳೆದ ವರ್ಷದಿಂದ ರಾಜಧಾನಿ ಬೆಂಗಳೂರಿನವರೆಗೆ ವಿಸ್ತರಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಯಶಸ್ವಿಗೊಳಿಸಲು ಸಚಿವ ಬಸವರಾಜ ಬೊಮ್ಮಾಯಿ ಮಾಡಿದ ಪ್ರಯತ್ನ ಶ್ಲಾಘನೀಯ ಎಂದರು. ಕಳೆದ ವರ್ಷ ರೂ.50 ಲಕ್ಷ ಅನುದಾನ ನೀಡಲಾಗಿತ್ತು. ಈ ವರ್ಷ ಅನುದಾನ ಹೆಚ್ಚಿಸಿದ ಮುಖ್ಯಮಂತ್ರಿಗಳನ್ನು ನಾಡಿನ ಜನತೆಯ ಪರವಾಗಿ ಅಭಿನಂದಿಸುವುದಾಗಿ ಮಾರಿಹಾಳ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಚೆನ್ನಮ್ಮಾಜಿ ಉತ್ಸವ ಸರ್ಕಾರಿ ಕಾರ್ಯಕ್ರಮವಾಗದೇ ಸಾರ್ವಜನಿಕ ಉತ್ಸವವಾಗಬೇಕು. ಪ್ರತಿಯೊಬ್ಬರೂ ಭಾಗವಹಿಸುವಂತೆ ಕರೆ ನೀಡಿದರು. ಸಾನ್ನಿಧ್ಯವನ್ನು ರುದ್ರಾಕ್ಷಿಮಠ ಬಸವಲಿಂಗ ಸ್ವಾಮೀಜಿ, ಹಣ್ಣಿಕೇರಿ ರಾಚೋಟೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪುರಸಭೆ ಅಧ್ಯಕ್ಷೆ ಸರಸ್ವತಿ ಕಟ್ಟಿಮನಿ, ತಾ.ಪಂ.ಅಧ್ಯಕ್ಷೆ ಬಸವ್ವ ಗುರ್ಲಕಟ್ಟಿ, ಉಪಾಧ್ಯಕ್ಷೆ ಪ್ರೇಮಾ ಶಿವಣ್ಣವರ, ವಿಶೇಷ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ವಿ.ಬಿ. ದಾಮಣ್ಣವರ, ತಹಸೀಲ್ದಾರ ಪಿ.ಎನ್. ಲೋಕೇಶ, ಮುಖ್ಯಾಧಿಕಾರಿ ಅರುಣ ರಾಣೆ, ಕಿತ್ತೂರ ತಹಸೀಲ್ದಾರ ಎಸ್.ಎಸ್.ಬಳ್ಳಾರಿ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಚ್. ಚೆನ್ನೂರ, ಸ್ವಾತಂತ್ರ್ಯಯೋಧರು, ಶಿಕ್ಷಕರು, ಸಾಹಿತಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ವಿಜಯೋತ್ಸವದಂತೆ ಚೆನ್ನಮ್ಮಾಜಿ ಜಯಂತಿಯನ್ನು ಸರ್ಕಾರದ ಮಟ್ಟ ದಲ್ಲಿ ಆಚರಿಸುವಂತೆ ನಿವೃತ್ತ ಮುಖ್ಯ ಶಿಕ್ಷಕ ಜಿ.ಬಿ.ತುರವರಿ ಮನವಿ ಮಾಡಿದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಕುಂಭಮೇಳ, ಕರಡಿ ಮಜಲು ಜ್ಯೋತಿಯಾತ್ರೆಗೆ ಹೆಚ್ಚಿನ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.