ADVERTISEMENT

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 8 ಮೇ 2018, 8:48 IST
Last Updated 8 ಮೇ 2018, 8:48 IST

ಚಿಕ್ಕೋಡಿ: 2017–18ನೇ ಸಾಲಿನಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಪ್ರತಿಶತ 87.01 ಫಲಿತಾಂಶದೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಈ ಮುಂಚಿನ ಸಾಲಿನ ಸ್ಥಾನವನ್ನು ಕಾಯ್ದುಕೊಂಡಿದೆ. ಜಿಲ್ಲೆಯ ಗೋಕಾಕ ವಲಯ ವಲಯವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದರೆ, ಮೂಡಲಗಿ ವಲಯ ಆರನೇ ಸ್ಥಾನ ಗಳಿಸಿದೆ.

ಚಿಕ್ಕೋಡಿ ಶೈಕ್ಷಣಿ ಜಿಲ್ಲೆ ವ್ಯಾಪ್ತಿಯ ಒಟ್ಟು ಎಂಟು ವಲಯಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದ 20650 ಗಂಡು ಮತ್ತು 17797 ಬಾಲಕಿಯರು ಸೇರಿದಂತೆ ಒಟ್ಟು 38447 ವಿದ್ಯಾರ್ಥಿಗಳ ಪೈಕಿ 17473 ಗಂಡು ಮತ್ತು 16100 ಬಾಲಕಿಯರು ಸೇರಿದಂತೆ ಒಟ್ಟು 33573 ವಿದ್ಯಾರ್ಥಿಗಳು ಪಾಸಾಗಿದ್ದು, ಜಿಲ್ಲೆಯ ಒಟ್ಟು ಫಲಿತಾಂಶ ಶೇ.87.01 ರಷ್ಟಾಗಿದೆ.

ಜಿಲ್ಲೆಯ 36 ಸರ್ಕಾರಿ, 8 ಅನುದಾನಿತ ಮತ್ತು 54 ಅನುದಾನರಹಿತ ಸೇರಿದಂತೆ ಒಟ್ಟು 98 ಪ್ರೌಢಶಾಲೆಗಳು ಪ್ರತಿಶತ ನೂರರಷ್ಟು ಫಲಿತಾಂಶ ಗಳಿಸಿವೆ. ಶೇ.80 ಫಲಿತಾಂಶವನ್ನು 154 ಸರ್ಕಾರಿ, 115 ಅನುದಾನಿತ ಮತ್ತು 148 ಶಾಲೆಗಳು ಪಡೆದುಕೊಂಡಿವೆ. ಶೇ. 60 ರಿಂದ 80ರವರೆಗೆ 38 ಸರ್ಕಾರಿ, 23 ಅನುದಾನಿತ ಮತ್ತು 24 ಅನುದಾನರಹಿತ ಶಾಲೆಗಳು ಪಡೆದುಕೊಂಡಿವೆ. ಶೇ.40 ರಿಂದ 60ವರೆಗೆ 7 ಸರ್ಕಾರಿ, 9 ಅನುದಾನಿತ ಮತ್ತು 9 ಅನುದಾನಿತ ಶಾಲೆಗಳು ಪಡೆದುಕೊಂಡಿವೆ. ಶೇ.40 ಕ್ಕಿಂತ ಕಡಿಮೆ ಫಲಿತಾಂಶವನ್ನು 1 ಸರ್ಕಾರಿ ಮತ್ತು 3 ಅನುದಾನಿತ ಶಾಲೆಗಳು ಪಡೆದುಕೊಂಡಿದ್ದು, ಜಿಲ್ಲೆಯ ಒಂದೂ ಪ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದುಕೊಂಡಿಲ್ಲ.

ADVERTISEMENT

ಜಿಲ್ಲೆಯ ಗೋಕಾಕ ವಲಯ ಶೇ.94.07 ಫಲಿತಾಂಶದೊಂದಿಗೆ ರಾಜ್ಯದಲ್ಲೇ ವಲಯವಾರು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದು, ಮೂಡಲಗಿ ವಲಯ ಶೇ.92.34 ಫಲಿತಾಂಶದೊಂದಿಗೆ ಆರನೇ ಸ್ಥಾನ ಪಡೆದಿದೆ. ನಿಪ್ಪಾಣಿ ವಲಯ ಶೇ.89.67, ಹುಕ್ಕೇರಿ ವಲಯ 88.69, ಕಾಗವಾಡ ಶೇ.88.27, ಚಿಕ್ಕೋಡಿ ಶೇ.83.04, ರಾಯಬಾಗ ಶೇ.82.69 ಮತ್ತು ಅಥಣಿ ವಲಯ ಶೇ.79.09 ಫಲಿತಾಂಶ ಪಡೆದಿವೆ ಎಂದು ಡಿಡಿಪಿಐ ಎಂ.ಜಿ.ದಾಸರ ತಿಳಿಸಿದ್ದಾರೆ.

‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು 2017–18ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವುದು ಸಂತಸ ತಂದಿದೆ. ಮಕ್ಕಳ ಶೃದ್ಧೆಯ ಅಧ್ಯಯನ, ಶಿಕ್ಷಕರ ಪರಿಶ್ರಮ ಮತ್ತು ಪಾಲಕರ ಪ್ರೋತ್ಸಾಹಕ್ಕೆ ಸಂದ ಪ್ರತಿಫಲವೇ ಈ ಫಲಿತಾಂಶವಾಗಿದೆ’ ಎಂದು ಡಿಡಿಪಿಐ. ಎಂ.ಜಿ.ದಾಸರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.